ಜಿಲ್ಲೆ

ವಿಜಯವಾಣಿ ಸಂಗೀತ ಸಂಜೆ ಪೋಸ್ಟರ್ ಬಿಡುಗಡೆ

ಮೈಸೂರು: ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ಜು. 30ರಂದು ಸಂಜೆ 5 ಗಂಟೆಗೆ ದತ್ತನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಆಯೋಜಿಸಿರುವ ‘ಸಂಗೀತ ಸಂಜೆ’ ಕಾರ್ಯಕ್ರಮದ ಪೋಸ್ಟರ್ ಅನ್ನು ಗುರುವಾರ ಬಿಡುಗಡೆ ಮಾಡಲಾಯಿತು.


ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಕೋರಿದರು.


ಬಳಿಕ ಮಾತನಾಡಿದ ಶ್ರೀಗಳು, ‘ವಿಜಯವಾಣಿ ಮತ್ತು ದಿಗ್ವಿಜಯ’ ನ್ಯೂಸ್ ವಾಹಿನಿ ವತಿಯಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಸಂಗೀತ ಕಲೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಜು.30ರಂದು ನಡೆಯುವ ಸಂಗೀತ ಸಂಜೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು, ಸಂಗೀತ ಪ್ರೇಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು’ ಎಂದು ಕರೆಕೊಟ್ಟರು.


ವಿಜಯವಾಣಿ ಪತ್ರಿಕೆಯ ಮೈಸೂರಿನ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ವ್ಯವಸ್ಥಾಪಕ ದೀಪಕ್ ಘಾಟ್ಗೆ, ಚಿರಾಗ್ ಆಡ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಹಾಜರಿದ್ದರು.

ಸಂಗೀತ ರಸದೌತಣ
ಭಾರತ್ ಇಂಟರ್‌ನ್ಯಾಷನಲ್ ಟ್ರಾವೆಲ್ಸ್ ಮುಖ್ಯ ಪ್ರಾಯೋಜಕತ್ವ, ಅನಿಫ್ರೇಮ್ಸ್ ಮತ್ತು ಹೋಟೆಲ್ ರಿಯೋ ಮೆರಿಡಿಯನ್ ಸಹ ಪ್ರಾಯೋಜಕತ್ವದಲ್ಲಿ ಈ ಸಂಗೀತ ಹಬ್ಬವನ್ನು ಆಯೋಜಿಸಲಾಗಿದೆ. ‘ಸಿತಾರ್ ವಾದನ, ಹಿಂದುಸ್ತಾನಿ ಗಾಯನ, ಕರ್ನಾಟಕ ಕೊಳಲು ಜುಗಲ್‌ಬಂದಿ’ ಮೂಲಕ ಹಿರಿಯ ಕಲಾವಿದರು ಸಂಗೀತ ರಸದೌತಣವನ್ನು ಉಣಬಡಿಸಲಿದ್ದಾರೆ.


ಹುಬ್ಬಳ್ಳಿಯ ಪಂಡಿತ್ ಜಯತೀರ್ಥ್ ಮೇವುಂಡಿ ಅವರು ‘ಹಿಂದುಸ್ತಾನಿ ಸಂಗೀತ ಕಛೇರಿ’ ನೀಡಲಿದ್ದು, ಚೆನ್ನೈನ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯ ‘ಕರ್ನಾಟಕ ಕೊಳಲು’, ಮಂಗಳೂರಿನ ವಿದ್ವಾನ್ ಅಂಕುಶ್ ನಾಯಕ್ ‘ಸಿತಾರ್’ ವಾದನ ನುಡಿಸುವ ಮೂಲಕ ನೆರೆದವರನ್ನು ರಂಜಿಸಲಿದ್ದಾರೆ. ಪಕ್ಕವಾದ್ಯದಲ್ಲಿ ಚೆನ್ನೈನ ವಿದ್ವಾನ್ ಪತ್ರಿ ಸತೀಶ್‌ಕುಮಾರ್ (ಮೃದಂಗ), ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್(ತಬಲ), ಮುಂಬೈನ ಪಂಡಿತ್ ಯಶ್ವಂತ್(ತಬಲ) ಹಾಗೂ ಮಂಗಳೂರಿನ ವಿದ್ವಾನ್ ನರೇಂದ್ರ ಎಲ್.ನಾಯಕ್(ಹಾರ್ಮೋನಿಯಂ) ಸಹಕಾರ ನೀಡಲಿದ್ದಾರೆ. ಕಲಾಸಕ್ತರು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.