ಬಾಗಲಕೋಟೆ: ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ವಿಜಯವಾಣಿ ಪತ್ರಿಕೆಯ ಮಾಧ್ಯಮ ಸಹಯೋಗದ ಅಡಿ ಜೂ. ೨೧ ರಂದು ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾವಣೆಯನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗಿದೆ.
ಅಂದು ನಡೆಯುವ ಯೋಗ ದಿನಾಚರಣೆ ಕುರಿತು ಬುಧವಾರ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ದೇಹ ಮನಸ್ಸುಗಳ ನಡುವೆ ಅನ್ಯೋನ್ಯತೆ ಸಾಧಿಸಿ ಭವಿಷ್ಯದ ವಿಶ್ವವನ್ನು ತನ್ಮೂಲಕ ಭಾರತವನ್ನು ಸಶಕ್ತ-ಸದೃಢಗೊಳಿಸುವುದು ವಿಶ್ವಯೋಗ ದಿನಾಚರಣೆ ಮೂಲ ಉದ್ದೇಶ ಎಂದರು.
ಪ್ರತಿ ವರ್ಷದಂತೆ ಈ ಸಲವೂ ಬಸವೇಶ್ವರ ವೀರಶೈವ ವಿದ್ಯಾವರ್ಧಕವೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಅಂದಾಜು ೧೦ ಸಾವಿರಕ್ಕೂ ಅಽಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಬಿವಿವಿ ಸಂಘದ ಅಡಿಯಲ್ಲಿ ಒಟ್ಟು ಮೂರು ಸ್ಥಳಗಳಲ್ಲಿ ಯೋಗ ದಿನಾಚಣೆ ಆಯೋಜಿಸಲಾಗಿದೆ. ಹಳೇ ಬಾಗಲಕೋಟೆಯಲ್ಲಿ ಇರುವ ಬಿವಿವಿ ಸಂಘದ ಕ್ರೀಡಾಂಗಣ, ವಿದ್ಯಾಗಿರಿಯಲ್ಲಿ ಇರುವ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ಮೈದಾನ ಹಾಗೂ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಕುಮಾರೇಶ್ವರ ಆಸ್ಪತ್ರೆಯ ಮೈದಾನದಲ್ಲಿ ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದ ಅಡಿಯಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಜೂ. ೨೧ ರಂದು ಬೆಳಗ್ಗೆ ೬.೪೫ ರಿಂದ ೭.೪೫ ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವವರು ಬೆಳಗ್ಗೆ ೬.೩೦ ಗಂಟೆ ಒಳಗಾಗಿ ಸ್ಥಳದಲ್ಲಿ ಉಪಸ್ಥಿತರಿರಬೇಕು. ಯೋಗದಲ್ಲಿ ಭಾಗವಹಿಸುವವರು ಹಾಸಿಕೊಳ್ಳಲು ಹಾಸಿಗೆ ಹಾಗೂ ಸಡಿಲವಾದ ಸಮವಸ್ತ್ರ ಧರಿಸಿಕೊಂಡು ಬರಬೇಕು ಎಂದರು.
ಬಿವಿವಿ ಸಂಘದ ಹಳೇ ಕ್ರೀಡಾಂಗಣದಲ್ಲಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳೀಬಾವಿ, ಆಯುಷ್ ವೈದ್ಯಕೀಯ ಕಾಲೇಜುಗಳ ಮತ್ತು ಔಷಽ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಹೈಸ್ಕೂಲ್ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ್ ಶೆಟ್ಟರ್ ಉಪಸ್ಥಿತರಿರುವರು. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ.ಆರ್.ಬಿ.ಹೊಸಮನಿ ನೇತೃತ್ವದ ತಂಡವು ಕಾಮನ್ ಯೋಗ ಪ್ರೊಟೋಕಲ್‌ದ ನಿರ್ದೇಶನ ಮತ್ತು ಪ್ರದರ್ಶನ ಮಾಡಲಿದ್ದಾರೆ. ಇಲ್ಲಿ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಶಿಕ್ಷಣ, ಪಾಲಿಟೆಕ್ನಿಕ್, ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ, ಔಷಧ ವಿಜ್ಞಾನ ಮತ್ತಿತರರ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಳೇ ಬಾಗಲಕೋಟೆಯ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ನವನಗರದ ಎಸ್.ನಿಜಲಿಂಗಪ್ಪ ಕಾಲೇಜ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ(ಬೇವೂರ) ನೇತೃತ್ವ ವಹಿಸುವರು. ಯೋಗ ಪರಿಣಿತ ವೈದ್ಯ ಡಾ.ಅಶೋಕ ಬಡಕಲಿ, ಡಾ.ಎಸ್.ಎಸ್.ದೊಡ್ಡಮನಿ ಮತ್ತು ಡಾ.ಹಿರನ್ಮಯಿ ಬ್ರಿಡ್ ನಿರ್ದೇಶನ ಮತ್ತು ಪ್ರದರ್ಶನ ನೀಡಲಿದ್ದಾರೆ. ಇಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ದಂತ ಮಹಾವಿದ್ಯಾಲಯ, ನರ್ಸಿಂಗ್ ಕಾಲೇಜ್, ಫಿಸಯೋಥೆರೇಪಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ನವನಗರದ ಸಾರ್ವಜನಿಕರು ಯೋಗದಲ್ಲಿ ಭಾಗವಹಿಸುವರು.
ಹಾಗೆಯೇ ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವ ವಹಿಸುವರು. ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಸಂಗಣ್ಣ ಕುಪ್ಪಸ್ತ ತಂಡವು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇಂಜನಿಯರಿಂಗ್ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ವಿದ್ಯಾಗಿರಿಯ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಮೂರು ಕಡೆ ನಡೆಯುವ ಯೋಗ ಕಾರ್ಯಕ್ರಮದ ಮಾಹಿತಿಯನ್ನು ವೀರಣ್ಣ ಚರಂತಿಮಠ ವಿವರಿಸಿದರು.
ನಗರದಲ್ಲಿ ಬಿವಿವಿ ಸಂಘದಿಂದ ಮೂರು ಕಡೆಗೆ ಯೋಗ ದಿನಾಚರಣೆ ಆಯೋಜಿಸಿದೆ. ಇನ್ನು ಸಂಘದ ಅಡಿಯಲ್ಲಿನ ವಿವಿಧ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಲ್ಲಿಯೂ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಒಟ್ಟಾರೆ, ಬಿವಿವಿ ಸಂಘದ ಮೂರು ಸಾವಿರ ಸಿಬ್ಬಂದಿ ಹಾಗೂ ೧೦ ಸಾವಿರಕ್ಕೂ ಅಽಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಾಗೆಯೇ ಎಲ್ಲ ಕಡೆಗೂ ಸಾರ್ವಜನಿಕರು ಭಾಗವಹಿಸಲು ಅವಕಾಶ ಇರುತ್ತದೆ.
ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ವೈದ್ಯಕೀಯ ಕಾಲೇಜ್ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ(ಬೇವೂರ), ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳೀಬಾವಿ, ಆಯುಷ್ ವೈದ್ಯಕೀಯ ಕಾಲೇಜುಗಳ ಮತ್ತು ಔಷಧಿ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಉಪಸ್ಥಿತರಿದ್ದರು.