ಜಿಲ್ಲೆ

‘ವಿಜಯವಾಣಿ’ ದೈನಿಕ ಹಾಗೂ ದಿಗ್ವಿಜಯ ನ್ಯೂಸ್‌ನಿಂದ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ

ಮೈಸೂರು: ಕನ್ನಡದ ನಂ.1 ದೈನಿಕ ‘ವಿಜಯವಾಣಿ’ ದೈನಿಕ ಹಾಗೂ ದಿಗ್ವಿಜಯ ನ್ಯೂಸ್ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಜ.27 ರಿಂದ 29ರವರೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ನಗರ ಪಾಲಿಕೆಯ ಪೌರ ಕಾರ್ಮಿಕರನ್ನು ಗುರುವಾರ ಗೌರವಿಸಲಾಯಿತು.

ಸರಸ್ವತಿಪುರಂನ ಜವರೇಗೌಡ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು, ವಾಹನ ಚಾಲಕರು ಹಾಗೂ ಸೂಪರ್‌ವೈಸರ್ ಸೇರಿ 12 ಜನರಿಗೆ ಗೌರವಧನ ನೀಡಲಾಯಿತು. ಮೇಯರ್ ಶಿವಕುಮಾರ್, ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜ್ ಗೌರವ ಧನ ವಿತರಿಸಿದರು.

ಮೇಯರ್ ಶಿವಕುಮಾರ್ ಮಾತನಾಡಿ, ‘ವಿಜಯವಾಣಿ’ ದೈನಿಕ ಹಾಗೂ ದಿಗ್ವಿಜಯ ನ್ಯೂಸ್ ಕೃಷಿ ಮೇಳ ಆಯೋಜಿಸುವ ಮೂಲಕ ಕೃಷಿ ಕ್ಷೇತ್ರದ ಹೊಸ ಆವಿಷ್ಕಾರ, ಸುಧಾರಣೆಗಳ ಕುರಿತು ಕೃಷಿಕರಿಗೆ ತಿಳಿಸುವ ಕಾರ್ಯ ಮಾಡಿದೆ. ಕೃಷಿ ಮೇಳದ ಮೂಲಕ ರೈತರಿಗೆ ಉತ್ತೇಜನ ನೀಡಲು ಮಾಡಿದ ಕಾರ್ಯ ಶ್ಲಾಘನೀಯ ಎಂದರು.

ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್ ಮಾತನಾಡಿ, ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರು, ಅನ್ನ ನೀಡುತ್ತಿರುವ ರೈತರು ಹಾಗೂ ದೇಶವನ್ನು ಸ್ವಚ್ಛವಾಗಿ ಇಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಎಲ್ಲರು ಧನ್ಯತೆಯಿಂದ ಸ್ಮರಿಸಿಕೊಳ್ಳಬೇಕು. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆದು ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಹೇಳಿದರು.

ಮೈಸೂರು ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕೋವಿಡ್‌ನಂತಹ ಸಂದರ್ಭದಲ್ಲಿ ಜೀವದ ಹಂಗು ತೊರೆದು ನಗರದ ಸ್ವಚ್ಛತೆಯನ್ನು ಕಾಪಾಡಿದ್ದಾರೆ. ಇಂತಹ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ವಿಚಾರ. ಪೌರ ಕಾರ್ಮಿಕರ ದಿನಾಚರಣೆ ಸಂದರ್ಭ ನಗರದ ಪೌರ ಕಾರ್ಮಿಕರಿಗೆ ‘ವಿಜಯವಾಣಿ’ ದೈನಿಕ ಹಾಗೂ ದಿಗ್ವಿಜಯ ನ್ಯೂಸ್ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಆಯೋಜಿಸಿತ್ತು ಎಂದು ಸ್ಮರಿಸಿದರು.

ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಹಾಗೂ ನಗರದ ಸ್ವಚ್ಛತೆಯ ವಿಚಾರದಲ್ಲಿ ಮಾಧ್ಯಮಗಳು ನಿರಂತರವಾಗಿ ನಗರ ಪಾಲಿಕೆಗೆ ಸಹಕಾರ ನೀಡುತ್ತಾ ಬಂದಿದೆ. ಹಲವಾರು ಬಾರಿ ನಗರ ಪಾಲಿಕೆ ಸ್ವಚ್ಛತೆಯಲ್ಲಿ ಕೈಗೊಂಡ ಉತ್ತಮ ಕಾರ್ಯಗಳಿಗೆ ಮಾಧ್ಯಮಗಳು ಮೆಚ್ಚುಗೆ ಸೂಚಿಸಿವೆ, ತಪ್ಪುಗಳು ಕಂಡು ಬಂದಾಗ ಟೀಕಿಸಿವೆ. ಮಾಧ್ಯಮದವರ ಮಾರ್ಗದರ್ಶನ ಇದೇ ರೀತಿ ಮುಂದುವರೆಯಲಿ ಎಂದು ಬಯಸುತ್ತೇನೆ ಎಂದರು. ಈ ಸಂದರ್ಭ ‘ವಿಜಯವಾಣಿ’ ದೈನಿಕ ಮೈಸೂರು ಸ್ಥಾನಿಯ ಸಂಪಾದಕ ಎಂ.ಆರ್. ಸತ್ಯನಾರಾಯಣ, ಮುಖ್ಯ ಉಪ ಸಂಪಾದಕ ಜೆ. ಶಿವಣ್ಣ ಹಾಗೂ ಇತರರು ಇದ್ದರು.

ಸ್ವಚ್ಛತೆಯಲ್ಲಿ ನಂ.1 ಸ್ಥಾನ ಪಡೆಯಬೇಕು
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನ್ ಪ್ರಾರಂಭಿಸಿದರು. ಪ್ರಾರಂಭದ ಎರಡು ವರ್ಷ ಮೈಸೂರು ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದ ನಂ.1 ನಗರ ಪ್ರಶಸ್ತಿ ಪಡೆದುಕೊಂಡಿತು. ನಂತರದ ವರ್ಷಗಳಲ್ಲಿ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಬಾರಿ 5ನೇ ಸ್ಥಾನ ಪಡೆದಿದೆ. ಈ ಪ್ರಶಸ್ತಿ ಬರಲು ಪೌರ ಕಾರ್ಮಿಕರ ಪರಿಶ್ರಮ ಕಾರಣ ಎಂದು ಮೇಯರ್ ಶಿವಕುಮಾರ್ ಹೇಳಿದರು.
ನಗರ ಸ್ವಚ್ಛತಾ ಪ್ರಶಸ್ತಿ ಪಡೆಯುವಲ್ಲಿ ಪೌರ ಕಾರ್ಮಿಕರ ಪಾತ್ರ ಒಂದು ಕಡೆಯಾದರೆ ನಗರದ ನಾಗರಿಕರು ಹಾಗೂ ಮಾಧ್ಯಮದ ಪಾತ್ರ ಕೂಡ ಅಷ್ಟೇ ಪ್ರಮುಖವಾಗಿದೆ. ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಮಾಧ್ಯಮಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಎಲ್ಲ ಪರಿಶ್ರಮದಿಂದ ಸ್ವಚ್ಛತೆಯಲ್ಲಿ ಮೈಸೂರು ದೇಶದ ಮಾದರಿ ನಗರವಾಗಿ ರೂಪುಗೊಂಡಿದೆ. ಸ್ವಚ್ಛತೆಯಲ್ಲಿ ಮೈಸೂರನ್ನು ಮತ್ತೆ ನಂ.1 ಸ್ಥಾನಕ್ಕೆ ಕೊಂಡೊಯ್ಯಲು ನಾವು ನೀವೆಲ್ಲರೂ ಸೇರಿ ಶ್ರಮಿಸಬೇಕಾಗಿದೆ ಎಂದರು.

ಕೃಷಿ ಮೇಳದ ಸ್ವಚ್ಛತಾ ಕಾರ್ಯದಲ್ಲಿ ಪೌರ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡಿದ್ದರು. ಪೌರ ಕಾರ್ಮಿಕರಿಗೆ ‘ವಿಜಯವಾಣಿ’ ದೈನಿಕ ಹಾಗೂ ದಿಗ್ವಿಜಯ ನ್ಯೂಸ್ ಚಾನೆಲ್ ಗೌರವ ಧನ ನೀಡುತ್ತಿರುವುದು ಸಂತಸದ ವಿಚಾರ. ಮಾಧ್ಯಮ ಸಂಸ್ಥೆಯೊಂದು ಪೌರ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ಹೀಗಾಗಿ ‘ವಿಜಯವಾಣಿ’ ದೈನಿಕ ಹಾಗೂ ದಿಗ್ವಿಜಯ ನ್ಯೂಸ್ ಬಳಗಕ್ಕೆ ಧನ್ಯವಾದ ಸಮರ್ಪಿಸುತ್ತೇನೆ
ಶಿವಕುಮಾರ್, ಮೇಯರ್