ಜಿಲ್ಲೆ

ವಿಜಯವಾಣಿ ಕೃಷಿ ಮೇಳಕ್ಕೆ ಮುನ್ನುಡಿ ಬರೆದ ಭವ್ಯ ಮೆರವಣಿಗೆ


ವಿಜಯವಾಣಿ ಸುದ್ದಿಜಾಲ ಮೈಸೂರು
ಕಣ್ಮನ ಸೆಳೆದ ಮೆರವಣಿಗೆ ಕೃಷಿ ಮೇಳಕ್ಕೆ ಮುನ್ನುಡಿ ಬರೆಯಿತು.
ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ‘ಕೃಷಿ ಮೇಳ’ ಮೆರವಣಿಗೆಯೊಂದಿಗೆ ಶುಕ್ರವಾರ ಚಾಲನೆ ಪಡೆಯಿತು. ಕೃಷಿ ಜಾತ್ರೆಗೆ ಇದು ಮೆರುಗು ನೀಡಿತು.
ನಗರದ ಸುಣ್ಣದಕೇರಿಯ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮೇಯರ್ ಶಿವಕುಮಾರ್, ವಿಆರ್‌ಎಲ್ ಟ್ರಾವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ದೇಗುಲದ ಹೊರ ಭಾಗದಲ್ಲಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ, ‘ಕೃಷಿ ಮೇಳ ಯಶಸ್ಸಿಯಾಗಲಿ’ ಎಂದು ಹಾರೈಸಿದರು.
ನಂದಿ ಕಂಬ, ವೀರಭದ್ರ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಕಂಸಾಳೆ, ತಮಟೆ, ನಗಾರಿ ಕಲಾತಂಡಗಳು ಭಾಗಿಯಾಗಿ ಮೆರವಣಿಗೆಗೆ ಕಳೆ ತಂದುಕೊಟ್ಟವು. ಜಾನಪದ ಕಲಾತಂಡಗಳ ನಾದಕ್ಕೆ ಸಾರ್ವಜನಿಕರು ಹೆಜ್ಜೆ ಹಾಕಿದರು. ಶಾಂತಲಾ ಚಿತ್ರಮಂದಿರದ ಸಿಗ್ನಲ್ ಮೂಲಕ ಚಾಮರಾಜ ಜೋಡಿ ರಸ್ತೆಯಲ್ಲಿ ಸಾಗಿ ಬಂದ ಮೆರವಣಿಗೆ ರಾಮಸ್ವಾಮಿ ವೃತ್ತವನ್ನು ದಾಟಿ ಮೇಳ ಆಯೋಜನೆಗೊಂಡಿದ್ದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾಪನಗೊಂಡಿತು.
ಪಾಲಿಕೆ ಸದಸ್ಯ ವಿ.ಲೋಕೇಶ್(ಪಿಯಾ), ಮಾಜಿ ಮೇಯರ್ ಪುರುಷೋತ್ತಮ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳೆಯರು, ಸಾರ್ವಜನಿಕರು, ವಿಆರ್‌ಎಲ್, ವಿಜಯವಾಣಿ, ದಿಗ್ವಿಜಯ ಬಳಗದ ಸಿಬ್ಬಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಗಮನ ಸೆಳೆದ ‘ಕೃಷ್ಣ’
ಮೆರವಣಿಗೆಯಲ್ಲಿ ಕಟ್ಟುಮಸ್ತಾದ ‘ಕೃಷ್ಣ’ ಹೆಸರಿನ ಹಳ್ಳಿಕಾರ್ ತಳಿಯ ಹೋರಿ ಎಲ್ಲರನ್ನೂ ಆಕರ್ಷಿಸಿತು. ಮುಂಚೂಣಿಯಲ್ಲಿ ಸಾಗಿದ ‘ಕೃಷ್ಣ’ನ ಗಾಂಭೀರ್ಯ ನಡೆ ದಾರಿಯುದ್ದಕ್ಕೂ ಜನರ ಗಮನ ಸೆಳೆಯಿತು. ದಷ್ಟಪುಷ್ಟ ದೃಢಕಾಯದ, ಗಟ್ಟಿಮುಟ್ಟಾದ ದೇಹಾಕೃತಿಯಿಂದ ಹೋರಿ ಎಲ್ಲರ ಕೇಂದ್ರಬಿಂದುವಾಯಿತು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಿ.ಜಿ.ಬಂಡೂರು ಕುರಿ ತೋಟದ ಮಾಲೀಕ ಬೋರೇಗೌಡ ಈ ಹೋರಿಯ ಮಾಲೀಕ. 5 ವರ್ಷ ಪ್ರಾಯದ ತಳಿ 1 ಕೋಟಿ ರೂ. ಬೆಲೆ ಬಾಳುತ್ತದೆ. ಒಂದು ಟನ್ ತೂಕ ಹೊಂದಿದೆ. ಸಾಮಾನ್ಯ ಹಳ್ಳಿಕಾರ್ ತಳಿಯ ಹೋರಿಗಳ ತೂಕ 500 ಕೆಜಿ ಇರುತ್ತದೆ. ಆದರೆ, ಕೃಷ್ಣನ ತೂಕ ಸಾಮಾನ್ಯಕ್ಕಿಂತ ಹೆಚ್ಚಿದೆ.