ಜಿಲ್ಲೆ

ವಿಜಯಯಾನಂದಕ್ಕೆ ತಲೆದೂಗಿದ ಸಚಿವ ಜೋಶಿ

Dharwad

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಗರದ ಪಿವಿಆರ್ ಚಿತ್ರಮಂದಿರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಜೀವನಗಾಥೆ (ಬಯೋಪಿಕ್) ಹೇಳುವ ‘ವಿಜಯಾನಂದ’ ಚಲನಚಿತ್ರವನ್ನು ಶನಿವಾರ ರಾತ್ರಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರ ಆರಂಭದಿಂದ ಕೊನೆಯವರಿಗೆ ತದೇಕಚಿತ್ತದಿಂದ ಚಲನಚಿತ್ರ ವೀಕ್ಷಿಸಿದ ಜೋಶಿ ಅವರು, ನಂತರ ಡಾ. ವಿಜಯ ಸಂಕೇಶ್ವರ ಅವರೊಂದಿಗೆ ಓಡಾಡಿದ ನೆನಪುಗಳನ್ನು ಹಂಚಿಕೊಂಡರು.

‘90ರ ದಶಕದಿಂದಲೂ ನಾನು ಡಾ. ವಿಜಯ ಸಂಕೇಶ್ವರ ಅವರನ್ನು ಬಲ್ಲೆ. ಚಲನಚಿತ್ರದಲ್ಲಿರುವ ಕಾರ್​ನಲ್ಲಿ ನಾನೂ ಅವರೊಂದಿಗೆ ಓಡಾಡಿದ್ದೇನೆ. ಈ ವಿಷಯ ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ, ಈ ಚಲನಚಿತ್ರದಲ್ಲಿ ಯಾವುದೇ ಉತ್ಪ್ರೇಕ್ಷೆಗಳು ಇಲ್ಲ. ದಾವಣಗೆರೆ ಗೋದಾಮು ಸುಟ್ಟಿದ್ದು ನನಗೆ ಗೊತ್ತಿದೆ. ಸುಟ್ಟಾಗ ಅಲ್ಲಿಗೆ ಹೋಗಿರುವುದು ನನಗೆ ನೆನಪಿದೆ. ಇಂಥ ಹಲವು ವಿಷಯಗಳನ್ನು ಚಲನಚಿತ್ರದಲ್ಲಿ ಮೂಡಿಬಂದಿವೆ ಎನ್ನುವುದಷ್ಟೆ ಅಲ್ಲದೆ, ಡಾ. ವಿಜಯ ಸಂಕೇಶ್ವರ ಅವರ ಜೀವನ ಹೇಗೆ ರೂಪುಗೊಂಡಿದೆ ಎನ್ನುವುದನ್ನು ಚಲನಚಿತ್ರದಲ್ಲಿ ಸತ್ಯಕ್ಕೆ ಅತ್ಯಂತ ಸಮೀಪವಾಗಿ ತೋರಿಸಲಾಗಿದೆ’ ಎಂದು ಖುಷಿಪಟ್ಟರು.

‘ಕನ್ನಡಿಗರು ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಜನರು ಹೆಮ್ಮೆಪಡುವಂಥ ಚಲನಚಿತ್ರ ವಿಜಯಾನಂದ. ಒಬ್ಬ ವ್ಯಕ್ತಿ ಛಲ, ವಿಶ್ವಾಸ, ಪ್ರಯತ್ನ ಹಾಗೂ ಪರಿಶ್ರಮ ಎಂಬ ನಾಲ್ಕು ಸಂಗತಿಗಳನ್ನು ಹೊಟ್ಟೆ-ಹೃದಯದಲ್ಲಿ ಇಟ್ಟುಕೊಂಡು ಪ್ರಯತ್ನ ಪಟ್ಟರೆ ಶೂನ್ಯದಿಂದ ಹೊಸ ಸೃಷ್ಟಿ ನಿರ್ಮಾಣ ಮಾಡಬಲ್ಲ ಎಂಬುದು ಚಲನಚಿತ್ರ ನೋಡಿದರೆ ಗೊತ್ತಾಗುತ್ತದೆ. ಈ ಚಲನಚಿತ್ರ ಜನರ ಪ್ರೀತಿ, ವಿಶ್ವಾಸ ಗಳಿಸುತ್ತಿದೆ. ಅದರಲ್ಲೂ ಯುವ ಜನರು ಸ್ಪೂರ್ತಿ ಪಡೆಯುವಂತಿದೆ. ವಿದ್ಯಾಭ್ಯಾಸ ಮಾಡಿದವರು, ಸರ್ಕಾರಿ ನೌಕರಿ ಹುಡುಕುವ ಮಾನಸಿಕತೆ ಹೊಂದಿರುವ ಯುವಕರಿಗೆ ಈಚಲನಚಿತ್ರ ನೋಡಿದರೆ ಹೊಸ ಉತ್ಸಾಹ, ಹುಮ್ಮಸ್ಸು, ಹೊಸ ಯೋಚನೆ ಬರುತ್ತದೆ. ತಂದೆಯ ಜತೆಗೆ ಡಾ. ಆನಂದ ಸಂಕೇಶ್ವರ ಅವರೂ ಪರಿಶ್ರಮ ಪಡುತ್ತಿದ್ದಾರೆ. ಹಾಗಾಗಿ ವಿಆರ್​ಎಲ್ ಸಂಸ್ಥೆ, ವಿಜಯವಾಣಿ ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ. ಗದಗನಿಂದ ಪ್ರಾರಂಭವಾಗಿ ಹುಬ್ಬಳ್ಳಿಯಿಂದ ಮುಂದುವರಿದಿರುವ ಡಾ. ವಿಜಯ ಸಂಕೇಶ್ವರ ಮತ್ತು ಡಾ. ಆನಂದ ಸಂಕೇಶ್ವರ ಅವರ ಯಶೋಗಾಥೆ ಜಗತ್ತಿನಾದ್ಯಂತ ಪಸರಿಸಲಿ’ ಎಂದು ಶುಭ ಕೋರಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಹು-ಧಾ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಪ್ರಭು ನವಲಗುಂದಮಠ, ಇತರರು ಚಲನಚಿತ್ರ ವೀಕ್ಷಿಸಿದರು.

ಹೊಸ ಅಧ್ಯಾಯ ಸೃಷ್ಟಿ

ವಿಜಯಾನಂದ ಚಲನಚಿತ್ರ ಉದ್ಯಮ ರಂಗದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ. ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಲಿದೆ. ಯುವಕರು ಪರಿಶ್ರಮ ಪಟ್ಟರೆ ಉದ್ಯಮ ರಂಗದಲ್ಲಿ ಹೊಸ ದಾಪುಗಾಲು ಇಡಬಹುದು ಎಂಬುದಕ್ಕೆ ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರೇ ಸಾಕ್ಷಿ. ಪರಿಶ್ರಮ, ಶ್ರದ್ಧೆ, ಸ್ಪರ್ಧಾ ಮನೋಭಾವ ಹೇಗಿರಬೇಕೆಂಬುದನ್ನು ಚಲನಚಿತ್ರ ಹೇಳಿಕೊಡುತ್ತದೆ.

-ಈರೇಶ ಅಂಚಟಗೇರಿ, ಹು-ಧಾ ಮಹಾನಗರ ಪಾಲಿಕೆ ಮಹಾಪೌರ

ಹೊಸ ಉದ್ಯಮಿಗಳಿಗೆ ಹುರುಪು

‘ವಿಜಯಾನಂದ’ ಚಲನಚಿತ್ರ ವೀಕ್ಷಣೆ ಮಾಡಿದ ಬಳಿಕ ಹೊಸ ಉದ್ಯಮಿಗಳಿಗೆ ಹುರುಪು ಬರುತ್ತದೆ. ಉದ್ಯಮ ರಂಗದಲ್ಲಿ ಹೇಗಿರಬೇಕೆಂಬುದನ್ನು ತೋರಿಸಿಕೊಡುತ್ತದೆ. ಯುವ ಉದ್ಯಮಿಗಳಿಗೆ ಉತ್ಸಾಹ ತರುತ್ತದೆ. ಉದ್ಯಮ ರಂಗದಲ್ಲಿ ಚಾಲೆಂಜ್ ಎದುರಿಸಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರ ಸಾಧನೆ ಕಣ್ಣ ಮುಂದೆ ಬರುವಂತಿದೆ.

-ವೆಂಕಟೇಶ ಮೇಸ್ತ್ರಿ, ಹು-ಧಾ ಮಹಾನಗರ ಪಾಲಿಕೆ ಮಾಜಿ ಮಹಾಪೌರ

ಕಾಯಕನಿಷ್ಠೆ ಗೋಚರ

ಡಾ. ವಿಜಯ ಸಂಕೇಶ್ವರ ಅವರು ಕಟ್ಟಿದ ವಿಆರ್​ಎಲ್ ಸಂಸ್ಥೆಯನ್ನು ಬಹಳಷ್ಟು ಜನರು ನೋಡಿದ್ದೇವೆ. ಆದರೆ ಅವರು ಪಟ್ಟ ಶ್ರಮ ಹೆಚ್ಚಿನವರಿಗೆ ಗೊತ್ತಿಲ್ಲ. ವಿಜಯಾನಂದ ಚಲನಚಿತ್ರ ವೀಕ್ಷಿಸಿದಾಗ ಅವರ ಪರಿಶ್ರಮ, ಶ್ರದ್ಧೆ, ಕಾಯಕ ನಿಷ್ಠೆ ಗೊತ್ತಾಗುತ್ತದೆ. ಮನಸು ಮಾಡಿದರೆ ಸಾಮಾನ್ಯ ಮನುಷ್ಯ ಕೂಡ ಹೇಗೆ ಸಾಧನೆ ಮಾಡಿ ಸಮಾಜಕ್ಕೆ ಬೆಳಕಾಗಬಲ್ಲ ಎಂಬುದನ್ನು ಚಲನಚಿತ್ರ ಹೇಳುತ್ತದೆ.

-ತಿಪ್ಪಣ್ಣ ಮಜ್ಜಗಿ, ಹು-ಧಾ ಮಹಾನಗರ ಪಾಲಿಕೆ ಸಭಾನಾಯಕ