ಜಿಲ್ಲೆ

ವಿಜಯಪುರದಲ್ಲಿ ಹೆಚ್ಚಿದ ಭೂಕಂಪನ, ಸದನದಲ್ಲಿ ವಿಪ ಸದಸ್ಯ ಸುನೀಲಗೌಡ ಪ್ರಶ್ನೆಗೆ ಸರ್ಕಾರದ ಉತ್ತರವೇನು??

ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಭೂಕಂಪನದ ಬಗ್ಗೆ ವಿಪ ಸದಸ್ಯ ಸುನೀಲಗೌಡ ಪಾಟೀಲ ಸದನದ ಗಮನ ಸೆಳೆದಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಅವರು, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪನದ ವಿವರ ಮತ್ತು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರ ಬಯಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವರು, ವಿಜಯಪುರ ಜಿಲ್ಲೆಯಲ್ಲಿ 2020ರಲ್ಲಿ ಯಾವುದೇ ಭೂಕಂಪನ ಸಂಭವಿಸಿಲ್ಲ. 2021ರಲ್ಲಿ 16 ಹಾಗೂ 2022ರಲ್ಲಿ 13 ಬಾರಿ ಭೂ ಕಂಪನವಾಗಿದೆ. ಗರಿಷ್ಠ 4.4ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳ ವೈಜ್ಞಾನಿಕ ಅಧಿಕಾರಿಗಳ ತಂಡವು ವಿಜಯಪುರ ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮುದಾಯಕ್ಕೆ ಭೂಕಂಪನದ ಬಗ್ಗೆ ಅರಿವು ಮೂಡಿಸಿ, ಭೂಕಂಪನದಿಂದಾಗುವ ಅಪಾಯಗಳನ್ನು ಹೇಗೆ ತಗ್ಗಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಸಮುದಾಯಕ್ಕೆ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದೆ. ಹಾಗೂ ಈ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಉಂಟಾದ ಭೂಕಂಪನಗಳ ಬಗ್ಗೆ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳಾದ ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಸಂಸ್ಥೆ, ಭಾರತೀಯ ಭೂ ವಿಜ್ಞಾನ ವೈಜ್ಞಾನಿಕ ಸರ್ವೇಕ್ಷಣೆ, ರಾಷ್ಟ್ರೀಯ ಶಿಲಾ ಯಂತ್ರಶಾಸ್ತ್ರ ಸಂಸ್ಥೆಗಳ ವೈಜ್ಞಾನಿಕ ಅಧಿಕಾರಿಗಳ ತಂಡವು ಸ್ಥಳ ಪರಿಶೀಲನೆ ಮತ್ತು ಅಧ್ಯಯನ ಕೈಗೊಳ್ಳಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.