ಜಿಲ್ಲೆ

ವಿಜಯಪುರದಲ್ಲಿ 85 ಕೆಜಿ ಪ್ಲಾಸ್ಟಿಕ್ ವಶ

ವಿಜಯಪುರ: ಪಟ್ಟಣದ ಗಾಂಧಿಚೌಕ, ವೆಂಕಟರಮಣಸ್ವಾಮಿ ದೇವಾಲಯ ರಸ್ತೆ ಹಾಗೂ ಹಲವೆಡೆ ಅಂಗಡಿ ಮುಂಗಟ್ಟುಗಳ ಮೇಲೆ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ ನೇತ್ವದಲ್ಲಿ ಮಂಗಳವಾರ ದಾಳಿ ನಡೆಸಿ 85 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದರು.

ಪ್ಲಾಸ್ಟಿಕ್ ಭೂಮಿಯಲ್ಲಿ ಕರಗುವುದಿಲ್ಲ, ಅದನ್ನು ಸುಡುವುದರಿಂದ ಮಾಲಿನ್ಯ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅಲ್ಲದೆ, ಪ್ಲಾಸ್ಟಿಕ್ ಮಾರಾಟ ಮಾಡುವುದು ಖರೀದಿಸಿಸುವುದು ಅಪರಾಧ. ಆದ್ದರಿಂದ ದಾಳಿ ನಡೆಸಿ ಕವರ್‌ಗಲನ್ನು ವಶಪಡಿಸಿಕೊಂಡಿದ್ದೇವೆ ಎಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ ತಿಳಿಸಿದರು.

ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಸಾಕಷ್ಟು ಬಾರಿ ತಿಳುವಳಿಕೆ ನೀಡಿದ್ದರೂ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ದಾಳಿ ನಡೆಸಲಾಗಿದೆ. ಮೊತ್ತೊಮ್ಮೊ ಮಾರಾಟ ಮಾಡಿದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಢ ವಿಧಿಸುವ ಜತೆಗೆ ಕೇಸು ದಾಖಲಿಸಲಾಗುತ್ತದೆ ಎಂದು ಎಂಜಿನಿಯರ್ ಗಂಗಾಧರ್ ತಿಳಿಸಿದರು.

ಉತ್ಪಾದನೆ ನಿಲ್ಲಿಸುವಂತೆ ಒತ್ತಾಯ: ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದೇವೆ. ಗ್ರಾಹಕರು ಬರಿಗೈಲಿ ಬಂದು ಖರೀದಿ ಮಾಡುತ್ತಾರೆ. ಕವರ್ ಕೊಡದಿದ್ದರೆ ಗ್ರಾಹಕರು ವಾಪಸ್ ಹೋಗ್ತಾರೆ. ನಾವು ಅಂಗಡಿಗಳಿಗೆ ಬಾಡಿಗೆ ಕಟ್ಟುವುದು ಹೇಗೆ ?. ನೀವು ಪ್ಲಾಸ್ಟಿಕ್ ಕವರ್ ಉತ್ಪಾದನೆ ನಿಲ್ಲಿಸಲು ಸರ್ಕಾರಕ್ಕೆ ವರದಿ ಕೊಡಿ ನಾವೂ ಮಾರಾಟ ನಿಲ್ಲಿಸ್ತೇವೆ ಎಂದು ಕೆಲ ವರ್ತಕರು ಅಧಿಕಾರಿಗಳನ್ನು ಒತ್ತಾಯಿಸಿದರು.

ಪುರಸಭಾ ವ್ಯವಸ್ಥಾಪಕ ಆಂಜನೇಯಲು, ಪೌರಕಾರ್ಮಿಕರಾದ ನಾಗರಾಜ್, ಸೀನಪ್ಪ, ಲಕ್ಷ್ಮಣ್, ಮಂಜುನಾಥ್ ಉಪಸ್ಥಿತರಿದ್ದರು.