ಜಿಲ್ಲೆ

ವಿಜಯಪುರದ ಚೈತನ್ಯಾ ಟಾಪರ್, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಎ ಶ್ರೇಣಿ, ವಿದ್ಯಾರ್ಥಿನಿಯರ ಮೇಲುಗೈ

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿಯ ಪ್ರಗತಿ ಪ್ರೌಢಶಾಲೆ ವಿದ್ಯಾರ್ಥಿನಿ ಜೆ.ಚೈತನ್ಯಾ 625 ಅಂಕಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿದ್ದಾರೆ. 6 ವಿದ್ಯಾರ್ಥಿಗಳು 624 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು, 8 ಮಂದಿ 623 ಅಂಕದೊಂದಿಗೆ ತೃತೀಯ ಸ್ಥಾನ ಅಲಂಕರಿಸಿದ್ದಾರೆ. 13 ವಿದ್ಯಾರ್ಥಿಗಳು 622, 9 ಮಂದಿ 621 ಹಾಗೂ 8 ವಿದ್ಯಾರ್ಥಿಗಳು 620 ಅಂಕಪಡೆದು ಸರದಿಯಂತೆ ಟಾರ್‌ಗಳ ಸಾಲಿನಲ್ಲಿದ್ದಾರೆ.

ಹೆಣ್ಮಕ್ಕಳೇ ಸ್ಟ್ರಾಂಗು: ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, 33 ವಿದ್ಯಾರ್ಥಿನಿಯರು ಟಾಪರ್ ಸಾಲಿನಲ್ಲಿದ್ದಾರೆ, 12 ವಿದ್ಯಾರ್ಥಿಗಳು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಪರೀಕ್ಷೆ ಎದುರಿಸಿದ್ದ 13,535 ಒಟ್ಟು ವಿದ್ಯಾರ್ಥಿಗಳ ಪೈಕಿ 576 ಹುಡುಗರು, 329 ಹುಡುಗಿಯರು ಅನುತ್ತೀರ್ಣಗೊಂಡಿದ್ದಾರೆ.

ಶೇ.93 ಲಿತಾಂಶ: ನಾಲ್ಕೂ ತಾಲೂಕುಗಳ 58 ಕೇಂದ್ರಗಳಲ್ಲಿ ಈ ಬಾರಿ 13,535 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 12,630 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.93.31 ಲಿತಾಂಶ ಪಡೆದುಕೊಂಡಿದೆ. ರಾಜ್ಯದ ಒಟ್ಟು ಜಿಲ್ಲೆಗಳಲ್ಲಿ ಗ್ರಾಮಾಂತರ ಜಿಲ್ಲೆ ಎ ಶ್ರೇಣಿಯ ಪಟ್ಟಿಯಲ್ಲಿದೆ.

ನಿರಾಸೆ ಮೂಡಿಸಿದ ಲಿತಾಂಶ: ಕಳೆದ ಮೂರು ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಉತ್ತಮ ಸ್ಥಾನಗಳಿಸಿದ್ದ ಜಿಲ್ಲೆ ಈ ಬಾರಿ ಮುಗ್ಗರಿಸಿದೆ. ಈ ಮೊದಲಿಗೆ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದ್ದ ಜಿಲ್ಲೆ ಏಕಾಏಕಿ 2020ರಲ್ಲಿ 3ನೇ ಸ್ಥಾನಕ್ಕೆ ಜಿಗಿದಿತ್ತು, 2021ನೇ ಸಾಲಿನಲ್ಲಿ ಎರಡನೇ ಸ್ಥಾನ ಅಲಂಕರಿಸಿ ಜಿಲ್ಲೆ ಬೀಗಿತ್ತು. ಈ ಬಾರಿ ಮೊದಲ ಸ್ಥಾನದ ನಿರೀಕ್ಷೆ ಹುಸಿಯಾಗಿದ್ದು, ಶೇ.93.31 ಲಿತಾಂಶಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಕರೊನಾ ನಡುವೆಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ. 45 ವಿದ್ಯಾರ್ಥಿಗಳು ಟಾಪರ್ ಆಗಿರುವುದು ಸಂತಸ ತಂದಿದೆ. ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, ಆದರೆ ಎದೆಗುಂದಬೇಕಿಲ್ಲ, ಮುಂದಿನ ಪೂರಕ ಪರೀಕ್ಷೆಯತ್ತ ಗಮನ ನೀಡಬೇಕು. ರೇವಣಪ್ಪ, ಸಿಇಒ ಜಿಪಂ ವಿದ್ಯಾರ್ಥಿನಿ ಚೈತನ್ಯಾ 625 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಪ್ರಗತಿ ಶಾಲೆಯಷ್ಟಲ್ಲದೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಇಂಥ ಸಾಧನೆಗೆ ಪಾತ್ರವಾಗಿರುವುದು ಅತೀವ ಸಂತಸ ತಂದಿದೆ. ಎಸ್. ಕೃಪಾಶಂಕರ್, ಪ್ರಗತಿ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ

ಚೈತನ್ಯಾಗೆ ಅಭಿನಂದನೆಗಳ ಸುರಿಮಳೆ: ದೇವನಹಳ್ಳಿ ತಾಲೂಕು ವಿಜಯಪುರ ಹೋಬಳಿ ಯಲುವನಹಳ್ಳಿಯ ಚೈತನ್ಯಾಳಿಗೆ ಗುರುವಾರ ಅಭಿನಂದನೆಗಳ ಸುರಿಮಳೆಯನ್ನೇ ಸುರಿಸಲಾಯಿತು. ಶಾಲಾ ಆಡಳಿತ ಮಂಡಳಿ, ಶಿಕ್ಷಕವರ್ಗ, ಪಾಲಕರು, ಸ್ನೇಹಿತರು, ಸಂಬಂಧಿಗಳು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪಟ್ಟಣದ ಪ್ರಗತಿ ಶಾಲಾ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ ಆಡಳಿತ ಮಂಡಳಿ ಚೈತನ್ಯಾ ಸಾಧನೆಯನ್ನು ಶ್ಲಾಸಿದರು.

ಉಚಿತ ಪ್ರವೇಶ: ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಮೊದಲ ಸ್ಥಾನ ಪಡೆದ ಚೈತನ್ಯಾಳ ಮುಂದಿನ ಶೈಕ್ಷಣಿಕ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸತೀಶ್ ಕುಮಾರ್ ಹಾರೈಸಿದರು. ಮುಂದಿನ ವಿದ್ಯಾಭ್ಯಾಸವನ್ನು ನಮ್ಮ ಸಂಸ್ಥೆಯಲ್ಲಿ ಮುಂದುವರಿಸಿದರೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದರು. ಶ್ರೀ ನಗರೇಶ್ವರಸ್ವಾಮಿ ಎಜುಕೇಷನ್ ಟ್ರಸ್ಟ್ ಆಡಳಿತ ಮಂಡಳಿಯಿಂದಲೂ ಚೈತನ್ಯಾ ಅವರನ್ನು ಸನ್ಮಾನಿಸಲಾಯಿತು.

ನಿರೀಕ್ಷೆ ಮೀರಿದ ಸಾಧನೆ: ಮಗಳು ಶೇ.95 ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಶೇ.100 ಅಂಕ ಪಡೆದು ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದಾಳೆ. ಇದು ನಿಜಕ್ಕೂ ನಮಗೆ ಬಹಳ ಸಂತಸ ತಂದಿದೆ ಎಂದು ಚೈತನ್ಯಾ ತಂದೆ ಜಗದೀಶ್ ‘ವಿಜಯವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು.

ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಳು. ನಾವೂ ಎಂದಿಗೂ ಅವಳ ಓದಿಗೆ ಅಡ್ಡಿಪಡಿಸಲಿಲ್ಲ, ಚೆನ್ನಾಗಿ ಓದಿ ಉತ್ತಮ ಅಂಕಪಡೆಯುತ್ತೇನೆ ಎನ್ನುತ್ತಿದ್ದಳು. ಅವಳ ಆತ್ಮವಿಶ್ವಾಸಕ್ಕೆ ಬಂದಿರುವ ಲಿತಾಂಶವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

ದಂಪತಿಯ ಒಬ್ಬಳೇ ಮುದ್ದಿನ ಮಗಳು; ಜಗದೀಶ್ ಹಾಗೂ ಕೃಪಾ ದಂಪತಿಯ ಒಬ್ಬಳೇ ಮಗಳು ಚೈತನ್ಯಾ. ಪ್ರಾಥಮಿಕ ಶಾಲಾ ಹಂತದಿಂದಲೂ ಓದಿನಲ್ಲಿ ಚುರುಕಿದ್ದಳು, ಅಜ್ಜಿ-ತಾತ, ತಂದೆ-ತಾಯಿಯೊಂದಿಗಿನ ಕೂಡುಕುಟುಂಬದ ವಾತಾವರಣದಲ್ಲಿ ಬೆಳೆದ ಹುಡುಗಿ ತಂದೆಯ ರೇಷ್ಮೆ ಕೃಷಿಯಲ್ಲೂ ಸಹಾಯ ಮಾಡುತ್ತಿದ್ದಳು. ಮನೆಯಲ್ಲಿ ಡ್ರಾಯಿಂಗ್, ಪೇಂಟಿಗ್ ಜತೆಗೆ ಬಿಡುವಿನ ವೇಳೆಯಲ್ಲಿ ತಾಯಿಯ ಕೆಲಸದಲ್ಲಿ ಸಹಾಯ ಬಿಟ್ಟರೆ, ಉಳಿದ ಸಮಯವನ್ನು ಓದಿನೊಂದಿಗೆ ಕಳೆಯುತ್ತಿದ್ದಳು ಎಂಬುದು ಕುಟುಂಬದವರ ಮಾಹಿತಿಯಾಗಿದೆ.

ಅನಾರೋಗ್ಯದ ನಡುವೆ ಪರೀಕ್ಷೆ: ನನ್ನ ಈ ಸಾಧನೆಗೆ ನನ್ನ ಪಾಲಕರು ಶಿಕ್ಷಕರು ಮತ್ತು ಸ್ನೇಹಿತರು ಸಹಕಾರವೇ ಕಾರಣ, ಮುಂಜಾನೆ 3 ಗಂಟೆಗೆ ಎದ್ದು ಇಷ್ಟಪಟ್ಟು ಓದುತ್ತಿದೆ. ತರಗತಿಯಲ್ಲಿ ಶಿಕ್ಷಕರು ಯಾವುದೇ ಬೇಸರ ತೋರದೆ ಪಠ್ಯದ ಅನುಮಾನಗಳನ್ನು ಪರಿಹರಿಸುತ್ತಿದ್ದರು. ಪರೀಕ್ಷೆ ಸಮಯದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆದರೂ ಧೃತಿಗೆಡದೆ ಶಾಂತ ರೀತಿಯಿಂದಲೇ ಪರೀಕ್ಷೆ ಎದುರಿಸಿದ್ದೆ, ನಿರೀಕ್ಷೆಯಂತೆಯೇ ಮೊದಲ ಸ್ಥಾನ ಬಂದಿದೆ. ಮುಂದಿನ ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಿ ಮುಂದಡಿ ಇಡುತ್ತೇನೆ ಎಂದು ಚೈತನ್ಯಾ ಇಂಗಿತ ವ್ಯಕ್ತಪಡಿಸಿದರು.