Oplus_16908288 
ಜಿಲ್ಲೆ

ವಿಜಯನಗರ ಜಿಲ್ಲೆಯ ನಾಲ್ಕು ಕಡೆ ಕಾಂಗ್ರೆಸ್ ಭವನ

ಹರಪನಹಳ್ಳಿ: ಪಟ್ಟಣದ ಪೂರ್ವಾಚಾರ್ಯ ಲೇಔಟ್ ಬಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಗುರುತಿಸಿರುವ ನಿವೇಶನವನ್ನು ಕೆಪಿಸಿಸಿ ಪದಾಧಿಕಾರಿಗಳು ಬುಧವಾರ ಪರಿಶೀಲನೆ ನಡೆಸಿದರು.

ಕೆಪಿಸಿಸಿ ಕಾರ್ಯದರ್ಶಿ ವಿಜಯ ಕೆ.ಮುಳಗುಂದ್ ಪಟ್ಟಣ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ನಿವೇಶನ ಕೋರಿ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಪುರಸಭೆ ಅಧಿಕಾರಿಗಳು 2750 ಚದರಡಿ ನಿವೇಶನವನ್ನು 30 ವರ್ಷದ ಅವಧಿಗೆ ಗುತ್ತಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಅಧ್ಯಕ್ಷರ ಹೆಸರಿನಲ್ಲಿ ಸ್ಥಳೀಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಯಿತು.

ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಮಾತನಾಡಿ, ರಾಜ್ಯದಲ್ಲಿ 480 ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿ ನಿರ್ಮಾಣದ ಗುರಿ ಹೊಂದಿದ್ದು, ಪ್ರಥಮ ಹಂತದಲ್ಲಿ 100 ಕಚೇರಿಗಳ ಸ್ಥಾಪನೆಗೆ ಸಿದ್ಧತೆ ನಡೆದಿದೆ. ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಹರಪನಹಳ್ಳಿ ಸೇರಿದಂತೆ ನಾಲ್ಕು ಕಡೆ ಸ್ಥಳ ಗುರುತಿಸಲಾಗಿದ್ದು, ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇನಲ್ಲಿ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದೇ ಸಮಯದಲ್ಲಿ ವರ್ಚುವಲ್ ಮುಖಾಂತರ ವಿಜಯನಗರ ಜಿಲ್ಲೆ ಸೇರಿದಂತೆ ಏಕಕಾಲದಲ್ಲಿ 100 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರ ಅನುದಾನ, ದಾನಿಗಳು ಹಾಗೂ ಟ್ರಸ್ಟಿಗಳ ಸಹಕಾರದೊಂದಿಗೆ ಒಂದು ವರ್ಷದಲ್ಲಿ ಕಾಂಗ್ರೆಸ್ ಭವನದ ಕಟ್ಟಡ ಪೂರ್ಣಗೊಳಿಸಲಾಗವುದು ಎಂದು ಸಿರಾಜ್ ಶೇಖ್ ಹೇಳಿದರು. ಪ್ರಮುಖರಾದ ಲಾಟಿ ದಾದಾಪೀರ್, ಜಾಕೀರ್ ಹುಸೇನ್, ವಸಂತಪ್ಪ, ಹುಲಿಕಟ್ಟಿ ಚಂದ್ರಪ್ಪ, ರಾಮಣ್ಣ, ಬಸವರಾಜ ಸಂಗಪ್ಪನವರ್ ಇತರರು ಇದ್ದರು.