ಜಿಲ್ಲೆ

ವಿಚ್ಛೇದನ ಬಯಸಿದ್ದ ದಂಪತಿ ಒಂದಾದರು

ಬಸವಕಲ್ಯಾಣ: ಮದುವೆಯಾದ ಕೆಲವೇ ವರ್ಷಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೆ ವಿಚ್ಛೇದನ ಬಯಸಿ ಕೋರ್ಟ್ ಮೊರೆ ಹೋಗಿದ್ದ ದಂಪತಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾದ ಪ್ರಸಂಗ ನಗರದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಜರುಗಿದೆ.

೨೦೧೧ರಲ್ಲಿ ಬಸವಕಲ್ಯಾಣ ತಾಲೂಕು ಮೂಲದ ಯುವಕ ಮತ್ತು ಮೈಸೂರು ಮೂಲದ ಯುವತಿ ಮದುವೆಯಾಗಿದ್ದರು. ಇಬ್ಬರ ಮಧ್ಯೆ ಹೊಂದಾಣಿಕೆ ಕಾಣದ್ದರಿಂದ ವರ್ಷದ ಹಿಂದೆ ದೂರವಾಗಲು ನಿರ್ಧರಿಸಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ದಂಪತಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾದಿರಿಸಿದ್ದರು.

ಈ ಮಧ್ಯೆ ಶನಿವಾರ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಲೋಕ ಅದಾಲತ್‌ನಲ್ಲಿ ದಂಪತಿಯನ್ನು ಕರೆಸಲಾಯಿತು. ನ್ಯಾಯಾಧೀಶರ ಸಮ್ಮುಖದಲ್ಲಿ ಮನಸ್ಸು ಬದಲಾಯಿಸಿ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿ ಪರಸ್ಪರ ಹಾರ ಬದಲಾಯಿಸಿಕೊಂಡರು.

ವಿವಾಹ ವಿಚ್ಛೇದನ ಸಾಮಾಜಿಕ ಪಿಡುಗು. ನಿಮ್ಮಿಂದ ಬೇರೆಯವರಿಗೆ ಮಾದರಿಯಾಗಲಿ. ಇಂಥ ಪ್ರಕರಣ ಕಡಿಮೆಯಾಗಲಿ. ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿ ಎಂಬ ಉದ್ದೇಶ ನ್ಯಾಯಾಲಯದ್ದು. ಮುಂದಿನ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನ ಸುಖಕರವಾಗಲಿ ಎಂದು ಹರಸಿ ದಂಪತಿಗೆ ನ್ಯಾಯಾಧೀಶರು ಶುಭ ಕೋರಿದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಚನ್ನಪ್ಪ, ನ್ಯಾಯಾಧೀಶೆ ಗಂಗವ್ವ ಆಯಟ್ಟಿ ಇತರರಿದ್ದರು. ನ್ಯಾಯವಾದಿ ಸಂಜೀವರೆಡ್ಡಿ ಯರಬಾಗ ಯುವತಿ ಪರ, ನ್ಯಾಯವಾದಿ ವಿಲಾಸ ಕಾಂಬಳೆ ಯುವಕನ ಪರ ವಾದ ಮಂಡಿಸಿದ್ದರು. ವಕೀಲರಾದ ಎಸ್.ಬಿ. ಮಾಶಾಳಕರ, ವಿಜಯಕುಮಾರ ವಟಗೆ, ರಾಜೇಂದ್ರ ಗುತ್ತೇದಾರ್, ಸಂಜೀವಕುಮಾರ ಗೌಂಡ, ಅನುಶಯ ಟಿ. ಇತರರಿದ್ದರು.