ಜಿಲ್ಲೆ

ವಿಚ್ಚೇದನ ಹಿಂಪಡೆದು ಒಂದಾದ 4 ಜೋಡಿಗಳು

ಬಾಗಲಕೋಟೆ: ಜಿಲ್ಲೆ ಹಾಗೂ ಅಧೀನ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 4 ಜೋಡಿಗಳು ಜುಲೈ 13 ರಂದು ನಡೆದ ಲೋಕ ಅದಾಲತ್‍ನಲ್ಲಿ ರಾಜಿ ಸಂದಾನದ ಮೂಲಕ ಪುನರ್ಮಿಲನ ಮಾಡಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಅಜಯಕುಮಾರ ಲಮಾಣಿ ಹಾಗೂ ಕಾಜೋಲ ದಂಪತಿಗಳು ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಜಿಲ್ಲಾ ಕುಟುಂಬ ನ್ಯಾಯಾಲಯದಲ್ಲಿ ಒಂದು ಮಾಡಲಾಯಿತು. ಒಂದಾದ ಜೋಡಿಗಳಿಂದ ಪರಸ್ಪದ ಹಾರ ಹಾಕಿಸಿ ಸಿಹಿ ತಿನಿಸಲಾಯಿತು. ಅಜಕುಮಾರ ಪರ ರಿಯಾನಾ ಕುಂಟೋಜಿ ವಕೀಲರು ಹಾಗೂ ಕಾಜೋಲ ಪರ ಜಿ.ಎಸ್.ರಾಠೋಡ ವಕೀಲರು ವಕಾಲತನಲ್ಲಿ ವಹಿಸಿದ್ದರು. ಬನಹಟ್ಟಿ, ಮುಧೋಳ ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ ತಲಾ ಒಂದು ವಿಚ್ಚೇದನ ಜೋಡಿಗಳನ್ನು ಒಂದು ಮಾಡಲಾಯಿತು.

ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 7984 ಪೈಕಿ 5815 ಹಾಗೂ ವಾಜ್ಯ ಪೂರ್ವ ಪ್ರಕರಣಗಳಾದ 20028 ಪೈಕಿ 17555 ಪ್ರಕರಣ ಸೇರಿ ಒಟ್ಟು 23370 ಪ್ರಕರಣಗಳನ್ನು ರಾಜಿ ಸಂದಾನ ಮೂಲಕ ಇತ್ಯರ್ಥಪಡಿಸಲಾಯಿತು. ಈ ಮೂಲಕ ಒಟ್ಟು 32.05 ಕೋಟಿ ರೂ.ಗಳ ಪ್ರಕರಣದ ಮೊತ್ತವಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 2288 ಪ್ರಕರಣಗಳ ಪೈಕಿ 1739, ಬೀಳಗಿ ನ್ಯಾಯಾಲಯದಲ್ಲಿ 277 ಪೈಕಿ 229, ಮುಧೋಳ ನ್ಯಾಯಾಲಯದಲ್ಲಿ 692 ಪೈಕಿ 519, ಬನಹಟ್ಟಿ ನ್ಯಾಯಾಲಯದಲ್ಲಿ 1429 ಪೈಕಿ 1004, ಹುನಗುಂದ ನ್ಯಾಯಾಲಯದಲ್ಲಿ 476 ಪೈಕಿ 327, ಇಲಕಲ್ಲ ನ್ಯಾಯಾಲಯದಲ್ಲಿ 501 ಪೈಕಿ 358, ಬಾದಾಮಿ ನ್ಯಾಯಾಲಯದಲ್ಲಿ 1267 ಪೈಕಿ 870 ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ 1227 ಪೈಕಿ 741 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಬ್ಯಾಂಕಿಗೆ ಸಂಬಂಧಿಸಿದಂತೆ ವಿದ್ಯುತ್ ಕಾಯ್ದೆಗೆ ಸಂಬಂಧಿಸಿದ 201 ಪ್ರಕರಣಗಳಿಗೆ ಮೊತ್ತ 7.8 ಲಕ್ಷಕ್ಕೆ ಇತ್ಯರ್ಥಗೊಂಡರೆ, ನೀರಿನ ಕರಕ್ಕೆ ಸಂಬಂಧಿಸಿದ 643 ಪೈಕಿ 273ಕ್ಕೆ 4.02 ಲಕ್ಷಕ್ಕೆ, ಕಂದಾಯ ಇಲಾಖೆಗೆ ಸಂಬಂಧಿಸಿದ 649 ಪೈಕಿ 599 ಪ್ರಕರಣ, ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 11143 ಪೈಕಿ 11143ಕ್ಕೆ 32.84 ಲಕ್ಷ ರೂ, ಆಸ್ತಿ ತೆರಿಗೆ ಸಂಬಂಧಿಸಿದಂತೆ 5077 ಪೈಕಿ 5077 ಪ್ರಕರಣಗಳನ್ನು 4.2 ಕೋಟಿ ರೂ.ಗಳಿಗೆ ಇತ್ಯರ್ಥಪಡಿಸಲಾಯಿತು. ಸಾಲ ವ್ಯವಹಾರಕ್ಕೆ ಸಂಬಂಧಿಸಿದ 672 ಪ್ರಕರಣ ಪೈಕಿ 156 ಪ್ರಕರಣಕ್ಕೆ 4.82 ಕೋಟಿಗೆ ಸೆಟೆಲ್‍ಮೆಂಟ್ ಮಾಡಲಾಯಿತು. ಜನನ ಮತ್ತು ಮರಣ ನೊಂದಣಿಗೆ ಸಂಬಂಧಿಸಿದ 1239 ಪೈಕಿ 1120 ಪ್ರಕರಣಕ್ಕೆ 2.1 ಲಕ್ಷಕ್ಕೆ ಇತ್ಯರ್ಥ ಪಡಿಸಲಾಯಿತು.

ಲೋಕ ಅದಾಲತ್ ಶಿಬಿರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, 1ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಇದ್ದರು.