ಚಾಮರಾಜನಗರ: ಸಾಂಗವಾಗಿ ಜರುಗಿದ ಪೂಜಾಕೈಂಕರ್ಯ, ಕೇಳುಗರ ಮನ ತಣಿಸಿದ ವಚನಗಾಯನ, ಬಸವಧರ್ಮದ ಚಿಂತನೆಗೆ ಹಚ್ಚಿದ ಪ್ರವಚನ ಹಾಗೂ ನಿರಂತರವಾಗಿ ನಡೆದ ದಾಸೋಹದಿಂದ ಈ ಬಾರಿಯ ಗ್ರಾಮಾಂತರ ಬಸವ ಜಯಂತಿ ವಿಚಾರಪೂರ್ಣವಾಗಿ ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮಾಂತರ ಬಸವ ಜಯಂತ್ಯುತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮ ಬೆಳಗ್ಗೆ 5 ಗಂಟೆಗೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸುವ ಮೂಲಕ ಪ್ರಾರಂಭವಾಯಿತು. ಶ್ರೀಮಠದ ಆವರಣದಲ್ಲಿ ಬೆಳಗ್ಗೆ 6 ಗಂಟೆಗೆ ಷಟ್ಸಲ ಧ್ವಜಾರೋಹಣ ನಡೆಸಲಾಯಿತು. ಬಳಿಕ ವಿವಿಧ ಮಠಗಳ ಮಠಾಧೀಶರು ಹಾಗೂ ಶರಣ ಬಂಧುಗಳ ನೇತೃಯ್ವದಲ್ಲಿ ಇಷ್ಠಲಿಂಗಪೂಜೆಯನ್ನು ನೆರವೇರಿಸಲಾಯಿತು.
ಮುಂಜಾನೆಯಿಂದಲೇ ಶ್ರೀಮಠಕ್ಕೆ ಆಗಮಿಸಿದ ಅಪಾರ ಪ್ರಮಾಣದ ಭಕ್ತರು, ವಿವಿಧ ಪೂಜಾಕೈಂಕರ್ಯಗಳಲ್ಲಿ ಭಾಗವಹಿಸುವ ಮೂಲಕ ಗುರುಕೃಪೆಗೆ ಪಾತ್ರರಾದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬಸವಣನವರ ಶರಣ ಪರಂಪರೆಯ ತತ್ವ-ಚಿಂತನೆಗಳ ಸಾರವನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಮಾದಾಪುರ ಮಠದ ಪೀಠಾಧ್ಯಕ್ಷ ಶ್ರೀತೊಂಟದಾರ್ಯ ಸ್ವಾಮೀಜಿ, ಮಾಡ್ರಹಳ್ಳಿ ಮಠದ ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಜಿ, ಮೂಡಗೂರು ಮಠದ ಶ್ರೀಉದ್ದಾನ ಸ್ವಾಮೀಜಿ, ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಕಬ್ಬಹಳ್ಳಿ ಮಠದ ಶ್ರೀಗುರುಸಿದ್ಧ ಸ್ವಾಮೀಜಿ, ಕುಂತೂರು ಮಠದ ಶ್ರೀಶಿವಪ್ರಭು ಸ್ವಾಮೀಜಿ, ಕೊತ್ತಲವಾಡಿ ಮಠದ ಶ್ರೀಗುರುಸ್ವಾಮೀಜಿ, ರಾಜಕಾರಣಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಸವಧರ್ಮ ವಿಶ್ವದಲ್ಲೇ ಶ್ರೇಷ್ಠ:
ವೈಜ್ಞಾನಿಕ ಮತ್ತು ವೈಚಾರಿಕ ತಳಹದಿಯ ಮೇಲೆ ಬಸವಣ್ಣನವರು ಸ್ಥಾಪಿಸಿದ ಬಸವ ಧರ್ಮ ವಿಶ್ವದಲ್ಲೇ ಶ್ರೇಷ್ಠವಾದ ಧರ್ಮವಾಗಿದೆ ಎಂದು ಸಂತೇಕಡೂರು ಪ್ರಭುದೇವ ಜ್ಞಾನ ಯೋಗಾಶ್ರಮದ ಶ್ರೀನವಲಿಂಗ ಶರಣ ಸ್ವಾಮೀಜಿ ಹೇಳಿದರು. ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಈ ಕಾರ್ಯಕ್ರಮ 12ನೇ ಶತಮಾನದ ಕಲ್ಯಾಣದ ಶರಣರನ್ನು ಮತ್ತು ಭಕ್ತರನ್ನು ನೋಡಿದಂತೆ ಭಾಸವಾಯಿತು. ಇದು ಬಸವಣ್ಣನವರ ಕಾಲಜ್ಞಾನದಂತೆ ನಡೆದುಕೊಂಡು ಹೋಗುತ್ತಿದೆ. ನಾವು ರೂಢಿಯೊಳಗೆ ಲಿಂಗಾಯತ ಧರ್ಮ ತಂದಿದ್ದೇವೆ, ವಚನ ಧರ್ಮ ಎನ್ನುತ್ತಿದ್ದೇವೆ, ಶರಣ ಧರ್ಮ ಎಂದು ಕರೆಯುತ್ತಿದ್ದೇವೆ. ಈ ವಿಚಾರದಲ್ಲಿ ನಾವೆಲ್ಲರೂ ತೊಳಲಾಟಕ್ಕೆ ಒಳಗಾಗಿದ್ದೇವೆ. ಇಡೀ ವಿಶ್ವದಲ್ಲೇ ಇಂತಹ ಧರ್ಮ ಸಿಗುವುದಿಲ್ಲ. ಮೂಲಭೂತ ವಿಚಾರಗಳನ್ನು ಇಟ್ಟುಕೊಂಡು ಸ್ಥಾಪಿಸಿದ ಈ ಬಸವ ಧರ್ಮ ವಿಶ್ವದಲ್ಲೇ ಶ್ರೇಷ್ಠ ಧರ್ಮವಾಗಿದೆ ಎಂದರು. ಜೀವನೋದ್ಧಾರಕ್ಕಾಗಿ ಕಾಯಕ, ಆತ್ಮೋದ್ಧಾರಕ್ಕಾಗಿ ಶಿವಯೋಗ, ಜೀವನ ಮುಕ್ತಿಗಾಗಿ ದಾಸೋಹವನ್ನು ಪರಿಚಯಿಸಿದ ಬಸವಣ್ಣನವರ ಧರ್ಮ ಅನುಭವ ಧರ್ಮವಾಗಿದ್ದು, ಅಲ್ಲಿನ ಪ್ರತಿಯೊಂದು ವಚನಗಳು ಅಮರವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೇವರು ಮತ್ತು ಧರ್ಮ ಎಂಬ ಅಲೌಕಿಕ ಜೀವನಕ್ಕೆ ಒಳಗಾಗದೇ, ಬಸವಧರ್ಮದ ಕಾಯಕ ಮತ್ತು ದಾಸೋಹ ತತ್ವಗಳನ್ನು ಬದುಕಿನಲ್ಲಿ ಪಾಲಿಸಬೇಕಿದೆ ಎಂದು ಸಲಹೆ ನೀಡಿದರು.
ಶಿಕ್ಷಣಕ್ಕೆ ಆದ್ಯತೆ ನೀಡಿದ ಶ್ರೀಮಠ:
ನಗರದ ಶ್ರೀಸಿದ್ಧಮಲ್ಲೇಶ್ವರ ಮಠ ಶಿಕ್ಷಣ ಮತ್ತು ದಾಸೋಹಕ್ಕೆ ಆದ್ಯತೆ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ ಎಂದು ಶ್ರೀಮಠದ ಹಳೆಯ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕ ಶಿವರಾಜಪ್ಪ ತಿಳಿಸಿದರು. ಈ ಹಿಂದೆ ಪೀಠಾಧ್ಯಕ್ಷರಾಗಿದ್ದ ಶ್ರೀಸಿದ್ಧಬಸರಾಜ ಸ್ವಾಮೀಜಿ ಅವರು ಕಾಯಕದ ಮಹತ್ವವನ್ನು ಸಾರಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದರು. ಯಾವ ಕೆಲಸವೂ ಕನಿಷ್ಠವಲ್ಲ ಎಂಬ ಅರಿವನ್ನು ಶ್ರೀಗಳು ಮೂಡಿಸಿದರು. ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಶ್ರೀ ಚನ್ನಬಸವ ಸ್ವಾಮೀಜಿ ಅವರು ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಹಿಂದಿನ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇದಕ್ಕೆ ಗುರುಗಳ ಸಂಕಲ್ಪ ಶಕ್ತಿ ಕಾರಣವಾಗಿದೆ. ಗದ್ದುಗೆ ಪ್ರಾರಂಭ, ಕಲ್ಯಾಣ ಮಂಟಪ, ದಾಸೋಹ ಭವನ ಹಾಗೂ ಇನ್ನಿತರೆ ಅಭಿವೃದ್ಧಿ ಕೆಲಸಗಳನ್ನು ಭಕ್ತರ ಸಹಕಾರದಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದರು.
ನಿರಂತರವಾಗಿ ನಡೆದ ದಾಸೋಹ:
ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸುಮಾರು 8-10 ಸಾವಿರ ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಬೆಳಗ್ಗೆಯಿಂದ ಪ್ರಾರಂಭವಾದ ದಾಸೋಹ ನಿರಂತರವಾಗಿ ನಡೆಯಿತು. ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ವಿವಿಧ ಕಾರ್ಯಕ್ರಮ:
ಗ್ರಾಮಾಂತರ ಬಸವ ಜಯಂತಿ ಅಂಗವಾಗಿ ಬುಧವಾರ ರಾತ್ರಿ ವಚನಗಾಯನ, ಭಕ್ತಿಗೇತೆಗಳ ಗಾಯನ ಹಾಗೂ ವಿವಿಧ ಮಹಿಳಾ ತಂಡಗಳಿಂದ ಗ್ರಾಮಾಂತರ ಭಜನಾ ಕಾರ್ಯಕ್ರಮನಡೆಯಿತು. ಗುರುವಾರ ರಾತ್ರಿ ಬದನಗುಪ್ಪೆ ಶ್ರೀಗುರುಮಲ್ಲೇಶ್ವರ ನಾಟಕ ಮಂಡಳಿ ವತಿಯಿಂದ ನಡೆದ ಪ್ರಭುಲಿಂಗಲೀಲೆ ನಾಟಕ ಗಮನಸೆಳೆಯಿತು.
ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಮೇಲೆ ಭಕ್ತರು ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಆಕಾರಣಕ್ಕೆ ಪ್ರತಿವರ್ಷವೂ ಗ್ರಾಮಾಂತರ ಬಸವಜಯಂತಿ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಬಾರಿಯೂ ಬಹಳ ಅರ್ಥಪೂರ್ಣವಾಗಿ ಗ್ರಾಮಾಂತರ ಬಸವ ಜಯಂತಿ ಆಯೋಜಿಸಲಾಗಿದೆ.
-ಶ್ರೀಚನ್ನಬಸವಸ್ವಾಮೀಜಿ, ಪೀಠಾಧ್ಯಕ್ಷ, ಶ್ರೀಸಿದ್ಧಮಲ್ಲೇಶ್ವರ ವಿರಕ್ತಮಠ, ಚಾಮರಾಜನಗರ