ಜಿಲ್ಲೆ

ವಿಚಾರಣೆ ವೇಳೆ ಸಮರ್ಪಕ ಮಾಹಿತಿ ಒದಗಿಸಿ

ಚಿತ್ರದುರ್ಗ: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜ.22ರಿಂದ 24ರವರಿಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ಸಾರ್ವಜನಿಕರ ಕುಂದುಕೊರತೆ, ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ ಎಂದು ಡಿಸಿ ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇಲಾಖೆ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸ್ಥಳದಲ್ಲೇ ಪ್ರಕರಣ ವಿಲೇವಾರಿಗೆ ಸಿದ್ಧವಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರುಗಳ ಬಗ್ಗೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪಲೋಕಾಯುಕ್ತರ ವಿಚಾರಣೆ ನಡೆಸುವರು.

ಇಲಾಖೆ ಮುಖ್ಯಸ್ಥರು ದೂರುದಾರರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಬೇಕು. ಕೆಲವು ದೂರುಗಳು ವೈಯಕ್ತಿಕ ಹೆಸರಲ್ಲಿದ್ದು, ಅಂತಹ ಅಧಿಕಾರಿಗಳು ಬೇರೆಡೆ ಇದ್ದರೆ ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರಕರಣದ ಮಾಹಿತಿ, ಸ್ಥಿತಿಗತಿ ಹಾಗೂ ನಿಖರ ಉತ್ತರವನ್ನು ವಿಚಾರಣೆ ವೇಳೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಕಚೇರಿಗಳಿಗೆ ಬರುವ ದೂರುಗಳನ್ನು ತಮ್ಮ ಹಂತದಲ್ಲೇ ಇತ್ಯರ್ಥಕ್ಕೆ ಕ್ರಮವಹಿಸಬೇಕು. ದೂರುಗಳ ವಿಲೇವಾರಿ ಪರಿಶೀಲಿಸಬೇಕು. ಅಗತ್ಯದಾಖಲೆಗಳು ಬೇಕಾಗಿದ್ದರೆ ಅರ್ಜಿದಾರರಿಗೆ ಸೂಕ್ತ ಕಾಲಾವಕಾಶ ನೀಡಬೇಕು. ನಿಗದಿತ ಸಮಯಲ್ಲಿ ದಾಖಲೆಗಳನ್ನು ಸಲ್ಲಿಸದಿದ್ದರೆ ಹಿಂಬರಹ ನೀಡಬೇಕು. ಅಸಮರ್ಪಕ ಮಾಹಿತಿಯೊಂದಿಗೆ ಪ್ರಕರಣದ ಇತ್ಯರ್ಥ ಬೇಡ ಎಂದು ತಾಕೀತು ಮಾಡಿದರು.

ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳಿಗೆ ಉಪಲೋಕಾಯುಕ್ತರು ಹಠಾತ್ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ಮಾತನಾಡಿ, ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ 73 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 2 ಇತ್ಯರ್ಥಗೊಂಡಿವೆ ಎಂದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ಉಪ ಲೋಕಾಯುಕ್ತರ ಮೂರು ದಿನಗಳ ಪ್ರವಾಸದ ವಿವರ ಒದಗಿಸಿದರು.

ಡಿವೈಎಸ್‌ಪಿ ಪಿ.ಕೆ. ದಿನಕರ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ. ಆನಂದ್, ಗಣಿ ಇಲಾಖೆ ಉಪ ನಿರ್ದೇಶಕ ಮಹೇಶ್, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ನಗರಸಭೆ ಆಯುಕ್ತೆ ಎಂ. ರೇಣುಕಾ ಮತ್ತಿತರರ ಅಧಿಕಾರಿಗಳು ಇದ್ದರು.