ಜಿಲ್ಲೆ

ವಿಚಾರಣೆ ನೆಪದಲ್ಲಿ ಕಿರುಕುಳ ಸಲ್ಲದು : ಬಿಜೆಪಿ ವಿರುದ್ಧ ಕೈ ಕಾರ್ಯಕರ್ತರ ಪಂಜಿನ ಮೆರವಣಿಗೆ

ಚನ್ನಪಟ್ಟಣ: ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ಅವರಿಗೆ ಇ.ಡಿ. ವಿಚಾರಣೆ ನೆಪದಲ್ಲಿ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ತಾಲೂಕು ಕಾಂಗ್ರೆಸ್​ ಕಾರ್ಯಕರ್ತರು ಗುರುವಾರ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

ನಗರದ ಮಂಗಳವಾರ ಪೇಟೆ ಕೆಎಸ್​ಐಸಿ ಕಾರ್ಖಾನೆ ಮುಂಭಾಗದಿಂದ ಗಾಂಧಿಭವನದವರೆಗೆ ಪಂಚಿನ ಮೆರವಣಿಗೆ ನಡೆಸಿದ ಕಾಂಗ್ರೆಸ್​ ಕಾರ್ಯಕರ್ತರು ದಾರಿಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್​ ಮುಖಂಡ ಪ್ರಸನ್ನ ಪಿ. ಗೌಡ ಮಾತನಾಡಿ, ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅವರಿಗೆ ಕೇಂದ್ರ ಸರ್ಕಾರದ ಪಿತೂರಿಯಿಂದಾಗಿ ಜಾರಿ ನಿರ್ದೇಶನಾಲಯ ಉದ್ದೇಶಪೂರ್ವಕವಾಗಿಯೇ ನೋಟಿಸ್​ ನೀಡಿ ಕಿರುಕುಳ ನೀಡುತ್ತಿದೆ. ಇ.ಡಿ. ವಿಚಾರಣೆ ನೆಪದಲ್ಲಿ ಬಿಜೆಪಿ ರಾಜಕೀಯ ದ್ವೇಷ ಸಾಧಿಸುತ್ತಿದೆ. ತನಿಖೆಯ ನೆಪದಲ್ಲಿ ವಿನಾಕಾರಣ ತೊಂದರೆ ನೀಡುವುದು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ನಾಯಕರಿಗೆ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸಿದ ಕಾಂಗ್ರೆಸ್​ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತದೆ. ಅಧಿಕಾರ ಯಾರಿಗೂ ಶಾಶ್ವತವಲ್ಲ.., ಸಿಕ್ಕ ಅಧಿಕಾರವನ್ನು ವಿರೋಧಿಗಳನ್ನು ಹಣಿಯಲು ಬಳಸುತ್ತಿರುವ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಎಸ್​.ಆರ್​.ಪ್ರಮೋದ್​, ಸುನಿಲ್​ಕುಮಾರ್​, ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು, ಹಾಪ್​ಕಾಮ್ಸ್​ ನಿರ್ದೇಶಕ ಶಿವಮಾದು, ಕಾಂಗ್ರೆಸ್​ ವಕ್ತಾರ ನಿಜಾಮ್​ ಫೌಜ್ದಾರ್​ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.