ಮೈಸೂರು: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಸಾಗಣೆ ವೆಚ್ಚದ ನೆಪದಲ್ಲಿ ರಸಗೊಬ್ಬರ ಮಾರಾಟ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ. ಹಾಗಾಗಿ, ವಿಚಕ್ಷಣ ದಳವನ್ನು ಜಾಗೃತಗೊಳಿಸಿ ಹೆಚ್ಚು ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಲಾರಿ ಬಾಡಿಗೆ ಹೆಚ್ಚಾಗಿದೆ ಎಂದು ಕಾರಣ ನೀಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದೂರ ಕೇಳಿ ಬಂದಿದೆ. ಹಾಗಾಗಿ ಯಾವ ಅಂಗಡಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೋ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದರು.
ಜಿಲ್ಲೆಯಲ್ಲಿ 22.8 ಮಿ.ಮೀ. ಮಳೆ ಕೊರತೆ ಉಂಟಾಗಿದೆ. ಜನವರಿಯಿಂದ ಜೂನ್‌ವರೆಗೆ 290.1 ಮಿ.ಮೀ. ವಾಡಿಕೆ ಮಳೆ ಬರಬೇಕಾಗಿತ್ತು. ಆದರೆ ಈ ಬಾರಿ 267.3 ಮಿಮೀನಷ್ಟು ಮಳೆಯಾಗಿದೆ. ಏಪ್ರಿಲ್‌ನಲ್ಲಿ 32.5 ಮಿ.ಮೀ., ಮೇ ತಿಂಗಳಲ್ಲಿ 38.7 ಮಿ.ಮೀ., ಜೂನ್‌ನಲ್ಲಿ 29.1 ಮಿ.ಮೀ. ಕಡಿಮೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ.8ರಷ್ಟು ಮಳೆ ಕೊರತೆ ಕಂಡು ಬಂದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಹೇಳಿದರು.
ಮೈಸೂರು ಜಿಲ್ಲೆಯಲ್ಲಿ 1,03,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಿದ್ದು, 64,375 ಕ್ವಿಂಟಾಲ್ ಬಿತ್ತನೆ ಭತ್ತದ ಬೇಡಿಕೆ ಇದೆ. ಬಿತ್ತನೆ, ರಸಗೊಬ್ಬರಕ್ಕೆ ದಾಸ್ತಾನಿದ್ದು, ಮಳೆ ಅಗುತ್ತಿದ್ದಂತೆಯೇ ವಿತರಣೆ ಕಾರ್ಯ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಜ್ಯೋತಿ ತಳಿಯ ಭತ್ತಕ್ಕೆ ಬೇಡಿಕೆ ಹೆಚ್ಚಾಗಿದ್ದು, ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಕ್ಯುಆರ್ ಕೋಡ್ ವ್ಯವಸ್ಥೆ ಮಾಡಲಾಗಿದ್ದು, ಕೆವೈಸಿ ಮಾಡಿಸಿರುವ ರೈತರು ಸ್ಕ್ಯಾನ್ ಮಾಡಿ, ಅಗತ್ಯಕ್ಕೆ ಅನುಗುಣವಾಗಿ ಭತ್ತ ಪಡೆದುಕೊಳ್ಳಬಹುದು ಎಂದು ತಿಳಿಸಿದರು.