ಜಿಲ್ಲೆ

ವಿಘ್ನಹರನ ಉತ್ಸವಕ್ಕೂ ಕರೊನಾ ಕಂಟಕ

ಹುಬ್ಬಳ್ಳಿ: ಪ್ರತಿ ವರ್ಷ ಲಕ್ಷಾಂತರ ಜನರು ವೀಕ್ಷಿಸುತ್ತಿದ್ದ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ಸರಳವಾಗಿರಲಿದೆ. ಎಲ್ಲೆಡೆ ವ್ಯಾಪಕವಾಗುತ್ತಿರುವ ಕರೊನಾ ಮಹಾಮಾರಿ ಅದ್ದೂರಿ ಗಣೇಶ ಉತ್ಸವಕ್ಕೆ ಬ್ರೇಕ್ ಹಾಕಿದೆ.

ಮುಂಬೈ ನಂತರ ಹುಬ್ಬಳ್ಳಿಯಲ್ಲಿಯೇ ಅತಿ ಹೆಚ್ಚು ಅದ್ದೂರಿಯಿಂದ ಗಣೇಶ ಹಬ್ಬ ಆಚರಿಸಲಾಗುತ್ತಿತ್ತು. ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಪ್ರತಿ ವರ್ಷ ನಾಲ್ಕುನೂರಕ್ಕೂ ಹೆಚ್ಚು ಕಡೆ ಬೃಹತ್ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕಣ್ಣು ಕೋರೈಸುವಂತಹ ಅಲಂಕಾರ, ವಿದ್ಯುತ್ ದೀಪಗಳಿಂದ ವರ್ಷದಿಂದ ವರ್ಷಕ್ಕೆ ಆಕರ್ಷಕವಾಗುತ್ತಿದ್ದ ಉತ್ಸವಕ್ಕೆ ಈ ಬಾರಿ ಕರೊನಾ ಛಾಯೆ ಆವರಿಸಿದೆ.

ಐತಿಹಾಸಿಕ, ಪೌರಾಣಿಕವಲ್ಲದೆ, ಪ್ರಸ್ತುತ ಘಟನಾವಳಿಗಳ ರೂಪಕಗಳ ಪ್ರದರ್ಶನ ಏರ್ಪಡಿಸುವ ಮೂಲಕ ಹುಬ್ಬಳ್ಳಿಯಲ್ಲಿ ಹನ್ನೊಂದು ದಿನಗಳ ಕಾಲ ವೀಕ್ಷಣೆಗೆ ಬರುವ ಜನರಿಂದಾಗಿ ಜಾಗರಣೆಯೇ ನಡೆಯುತ್ತಿತ್ತು.

ಸರಳ ಆಚರಣೆ: ಈಗಾಗಲೇ ರಾಜ್ಯ ಸರ್ಕಾರ ಕೂಡ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದೆ. ಹಾಗಾಗಿ, ಸಂಪ್ರದಾಯ ಬಿಡದೆ ಅತ್ಯಂತ ಸರಳ ರೀತಿಯಲ್ಲಿ ಗಣೇಶ ಉತ್ಸವ ಆಚರಣೆಗೆ ಹುಬ್ಬಳ್ಳಿಗರು ಸಿದ್ಧರಾಗುತ್ತಿದ್ದಾರೆ. ಮಹಾಮಂಡಳದ ಅಧ್ಯಕ್ಷರು, ಇತರ ಪದಾಧಿಕಾರಿಗಳು ಸೇರಿ ಹಬ್ಬದ ಕುರಿತು ರ್ಚಚಿಸಿದ್ದಾರೆ. ಲಾಕ್​ಡೌನ್ ನಂತರ ಪ್ರಮುಖ ಗಣೇಶೋತ್ಸವ ಸಮಿತಿಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೂಡ ಹೊರಬೀಳಲಿದೆ. ಆದಷ್ಟು ಸರಳವಾಗಿ ಹಬ್ಬ ಆಚರಿಸಲು ಎಲ್ಲರೂ ಮುಂದೆ ಬರುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಉತ್ಸವ ನಡೆಯಲಿದೆ ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ತಿಳಿಸಿದ್ದಾರೆ.

ಕೋಟ್ಯಂತರ ರೂ. ವಹಿವಾಟು

ಹುಬ್ಬಳ್ಳಿ- ಧಾರವಾಡ ಸಾರ್ವಜನಿಕ ಗಣೇಶೋತ್ಸವ ಎಂದರೆ ಕೋಟ್ಯಂತರ ರೂ.ಗಳ ವಹಿವಾಟು ನಡೆಯುತ್ತಿತ್ತು. ದೊಡ್ಡ ದೊಡ್ಡ ಗಣೇಶ ಮೂರ್ತಿ ನಿರ್ವಣ, ದೇಣಿಗೆ ಸಂಗ್ರಹ, ಗಣೇಶ ಮಂಟಪದ ತಯಾರಿ, ಅಲಂಕಾರ-ರೂಪಕಗಳನ್ನು ಮಾಡುವುದು, ಪಟಾಕಿ, ಇತರೆ ವಸ್ತುಗಳ ಮಾರಾಟ ಚಟುವಟಿಕೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಲಾಗುತ್ತಿತ್ತು.

ಕಲಾವಿದರು, ಡೆಕೋರೇಶನ್, ಹೂ- ಹಣ್ಣು- ತರಕಾರಿ ಬಳಕೆ, ಹನ್ನೊಂದು ದಿನಗಳವರೆಗೆ ನಿರಂತರ ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ಹೀಗೆ ಭಾರಿ ಪ್ರಮಾಣದಲ್ಲಿ ಕಳೆಗಟ್ಟುತ್ತಿದ್ದ ಹುಬ್ಬಳ್ಳಿ ಗಣೇಶೋತ್ಸವದಲ್ಲಿ ಈ ಬಾರಿ ಅದೆಲ್ಲ ಇರುವುದಿಲ್ಲ.

ವಿಘ್ನ ವಿನಾಶಕನ ಆರಾಧನೆಯೊಂದಿಗೆ ಸಾವಿರಾರು ಜನರಿಗೆ ಉದ್ಯೋಗವೂ ಲಭಿಸುತ್ತಿತ್ತು. ಕರ್ನಾಟಕ ಅಷ್ಟೇ ಅಲ್ಲ, ಪಶ್ಚಿಮ ಬಂಗಾಳ, ಪುಣೆ ಇತ್ಯಾದಿ ಕಡೆಗಳಿಂದಲೂ ಕಲಾವಿದರು ಇಲ್ಲಿಗೆ ಬಂದು ಮೂರ್ತಿ ತಯಾರಿಸುತ್ತಿದ್ದರು. ಈ ಬಾರಿ ಕಲಾವಿದರಿಗೆ ಅನೇಕ ಉತ್ಸವ ಸಮಿತಿಯವರು ಮೂರ್ತಿ ತಯಾರಿಗೆ ಇನ್ನೂ ಆರ್ಡರ್ ಕೂಡ ಕೊಟ್ಟಿಲ್ಲ.

5 ಅಡಿಗಿಳಿದ ಹುಬ್ಬಳ್ಳಿ ಕಾ ರಾಜಾ

ಹುಬ್ಬಳ್ಳಿಯ ದಾಜಿಬಾನ ಪೇಟೆಯಲ್ಲಿ ಪ್ರತಿಷ್ಠಾಪಿಸುವ ಹುಬ್ಬಳ್ಳಿ ಕಾ ರಾಜಾ ಗಣೇಶ ಮೂರ್ತಿ ಅತ್ಯಂತ ದೊಡ್ಡದು. ಪ್ರತಿ ವರ್ಷ 20ರಿಂದ 22 ಅಡಿ ಎತ್ತರದ ಮಂಗಲಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಈ ವರ್ಷ ಕರೊನಾದಿಂದಾಗಿ ಉತ್ಸವ ಸಂಪ್ರದಾಯಕ್ಕಷ್ಟೇ ಸೀಮಿತವಾಗಲಿದೆ. ಮೆರವಣಿಗೆ ಇರುವುದಿಲ್ಲ. ಈ ಬಾರಿ ಗಣೇಶ ಮೂರ್ತಿ ಎತ್ತರ 5 ಅಡಿಗೆ ಇಳಿಸಲಾಗುತ್ತಿದೆ. ಪ್ರತಿ ವರ್ಷಕ್ಕಿಂತ ಸಣ್ಣ ಮಂಟಪ ನಿರ್ವಿುಸಿ ಪೂಜಿಸುತ್ತೇವೆ. ಶಾಸ್ತ್ರ, ಸಂಪ್ರದಾಯ, ಭಕ್ತಿ-ಭಾವಕ್ಕೆ ಕೊರತೆಯಾಗುವುದಿಲ್ಲ. ಕರೊನಾದಿಂದ ಮುಕ್ತಿ ನೀಡುವಂತೆ ಗಣಪನಲ್ಲಿ ಪ್ರಾರ್ಥಿಸುತ್ತೇವೆ. ಮೊದಲೇ ವ್ಯಾಪಾರ ವಹಿವಾಟು ಇಲ್ಲದೆ ಜನ ಕಂಗೆಟ್ಟಿದ್ದಾರೆ. ಹೀಗಾಗಿ ಉತ್ಸವವೂ ಸರಳವಾಗಿರಲಿದೆ ಎಂದು ದಾಜಿಬಾನಪೇಟ ಶ್ರೀ ಗಣೇಶೋತ್ಸವ ಸಮಿತಿಯ ಪಾಂಡುರಂಗ ಮೆಹರವಾಡೆ ಪ್ರತಿಕ್ರಿಯಿಸಿದರು.

ಇದೇ ರೀತಿ ಹಲವು ಸಮಿತಿಯವರು ಇಂತಹ ನಿರ್ಧಾರ ಮಾಡಿದ್ದಾರೆ. ಮಹಾಮಂಡಳದವರೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಗಣೇಶೋತ್ಸವಕ್ಕೆ ಸಂಬಂಧಿಸಿ ಸರ್ಕಾರದ ಮಾರ್ಗಸೂಚಿ ಇನ್ನೂ ಬಂದಿಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಹೆಚ್ಚು ಜನ ಸೇರುವುದಕ್ಕಂತೂ ಅವಕಾಶ ಇಲ್ಲವೇ ಇಲ್ಲ. ಅಗತ್ಯ ಬಿದ್ದರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೂ ಸಭೆ ನಡೆಸಲಾಗುವುದು. ಜನರ ಆರೋಗ್ಯ ದೃಷ್ಟಿಯಿಂದ ಈಗಿನ ಸೂಕ್ಷ್ಮ ಪರಿಸ್ಥಿತಿ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು.| ನಿತೇಶ ಪಾಟೀಲ, ಜಿಲ್ಲಾಧಿಕಾರಿ ಧಾರವಾಡ