ಹಾಸನ : ಬೇಲೂರು ತಾಲ್ಲೂಕಿನ ನಂದಗೋಡನಹಳ್ಳಿ ನೂರಾರು ಮರಗಳ ಹನನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ವಶದಲ್ಲಿರುವ ವಿಕ್ರಂ ಸಿಂಹ ಅವರನ್ನು ಭಾನುವಾರ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಅಗತ್ಯ ಮಾಹಿತಿ ಕಲೆ ಹಾಕಿದರು.
ಎಸಿಎಫ್ ಡಾ. ಪ್ರಭುಗೌಡ ಬಿರಾದಾರ ಹಾಗು ಡಿಆರ್‌ಎಫ್‌ಒ ವಿನಯ್‌ಕುಮಾರ್ ಅವರು ವಿಚಾರಣೆಯ ನೇತೃತ್ವ ವಹಿಸಿದ್ದರು.
ಶನಿವಾರ ಬೆಂಗಳೂರಿನ ಅವರ ನಿವಾಸದಲ್ಲಿ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಬೆಳಿಗ್ಗೆ ನಗರ ಹೊರವಲಯದ ಗೆಂಡೆಕಟ್ಟೆ ಅರಣ್ಯ ಇಲಾಖೆ ಕಚೇರಿಗೆ ಕರೆತಂದರು. ನಂತರ ವೈದ್ಯಕೀಯ ಪರೀಕ್ಷೆಗಾಗಿ ಹಿಮ್ಸ್ ಆಸ್ಪತ್ರೆಗೆ ಕರೆತರಲಾಯಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಲೋಕೇಶ್ ನೇತೃತ್ವದಲ್ಲಿ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ರಕ್ತದೊತ್ತಡ ಹೆಚ್ಚಿರುವುದಾಗಿ ದೃಢಪಡಿಸಿದ ಅಧಿಕಾರಿಗಳು ಒಂದು ಗಂಟೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದರು. ಬಳಿಕ ಅರಣ್ಯ ಭವನಕ್ಕೆ ಕರೆದೊಯ್ದ ಅಧಿಕಾರಿಗಳು ಮತ್ತಷ್ಟು ಮಾಹಿತಿ ಪಡೆದು ನಂತರ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಜೆಎಂಎಫ್‌ಸಿ ನ್ಯಾಯಾಧೀಶ ಪ್ರಕಾಶ್ ನಾಯ್ಕ ಅವರ ಎದುರು ಹಾಜರುಪಡಿಸಿ ನಂತರ ಸ್ಥಳ ಮಹಜರಿಗಾಗಿ ನಂದಗೋಡನಹಳ್ಳಿಗೆ ಕರೆದುಕೊಂಡು ಹೋಗಲಾಯಿತು.
ತಹಶೀಲ್ದಾರ್ ವಿರುದ್ಧ ಆಕ್ರೋಶ :
ಮರಗಳ ಹನನ ವಿಚಾರವಾಗಿ ತುಂಬಾ ಹೇಳೋದಿದೆ. ಆ ಅಧಿಕಾರಿಯ ನಿಷ್ಠೆ ಯಾರಿಗೆ ಅನ್ನೋದನ್ನು ಹೇಳ್ತಿನಿ. ಸಂಸದ ಪ್ರತಾಪ್ ಸಿಂಹ ಅವರ ರಾಜಕೀಯ ಏಳಿಗೆ ಸಹಿಸದೆ ಈ ಷಡ್ಯಂತ್ರ ಮಾಡಿದ್ದಾರೆ. ಇದರ ಹಿಂದೆ ದೊಡ್ಡವರ ಕೈವಾಡ ಇದೆ. ಯಾರು ನಿಷ್ಠಾವಂತ ಅಧಿಕಾರಿ ಎಂದು ಹೇಳುತ್ತಿದ್ದಿರೋ ಅವರ ನಿಷ್ಠೆಯನ್ನು ಬಹಿರಂಗಪಡಿಸುತ್ತೇನೆ. ಬೇಲೂರು ತಹಶೀಲ್ದಾರ್ ನಿಷ್ಠೆ ಯಾರಿಗೆ ಅನ್ನೋದನ್ನ ಹೇಳ್ತಿನಿ ಎಂದು ವೈದ್ಯಕೀಯ ಪರೀಕ್ಷೆಗಾಗಿ ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾಧ್ಯಮದ ಮುಂದೆ ವಿಕ್ರಂ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.