ಜಿಲ್ಲೆ

ವಿಕಾಸ ಯುವ ಪ್ರೇರಣೆ ಅಭಿಯಾನಕ್ಕೆ ಚಾಲನೆ

ಧಾರವಾಡ: ಪಾಲಿಟೆಕ್ನಿಕ್ ಮತ್ತು ಐಟಿಐ ಅಂತಿಮ ವರ್ಷದ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ಬಳಿಕ ಸ್ವಂತ ಉದ್ಯಮ ಪ್ರಾರಂಭಿಸುವ ನಿಟ್ಟಿನಲ್ಲಿ ತರಬೇತಿ ಮತ್ತು ಸಕಾಲಿಕ ಆರ್ಥಿಕ ಸಹಾಯ ನೀಡಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ‘ವಿಕಾಸ ಯುವ ಪ್ರೇರಣಾ ಅಭಿಯಾನ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು.

ಬಸವರೆಡ್ಡಿ ಐಟಿಐನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಕಾಸ ಯುವ ಪ್ರೇರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಗೆ ಆಯ್ಕೆಯಾದ ಕಾಲೇಜಿನಲ್ಲಿ ಮೂರು ಹಂತಗಳ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಆಯ್ಕೆಯಾದ ಕಾಲೇಜ್ ಕ್ಯಾಂಪಸ್​ನಲ್ಲಿಯೇ ಮಾಹಿತಿ ಕಾರ್ಯಕ್ರಮ. ಎರಡನೇ ಹಂತದಲ್ಲಿ ಬ್ಯಾಂಕ್ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ಮೂರನೇ ಹಂತದಲ್ಲಿ ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿ ತನ್ನದೇಯಾದ ಉದ್ಯಮ ಸ್ಥಾಪಿಸಬಯಸಿದಲ್ಲಿ ಹತ್ತು ಲಕ್ಷ ರೂ.ವರೆಗೆ ಆರ್ಥಿಕ ಸಹಾಯ ಕಲ್ಪಿಸಲಿದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಯಿಂದ ವೃತ್ತಿಪರ ಕೋಸ್ ಮುಗಿಸಿದ ವಿದ್ಯಾರ್ಥಿಗಳು ಬೇರೆ ಕಡೆ ಉದ್ಯೋಗಿಯಾಗುವ ಬದಲಿಗೆ ತಾವೇ ಉದ್ಯೋಗದಾತರಾಗಿ ಬೆಳೆಯಬಹುದು. ಇಲೆಕ್ಟ್ರೀಷಿಯನ್, ಪ್ಲಂಬರ್, ವಾಹನ ರಿಪೇರಿ, ಕಂಪ್ಯೂಟರ್ ಸೇವೆ ಮುಂತಾದವುಗಳನ್ನೊಳಗೊಂಡ ಗುಂಪು ರಚಿಸಿಕೊಂಡು ನಗರಗಳಲ್ಲಿ ಆಪ್ ಆಧಾರಿತ ಸೇವೆ ನೀಡುವತ್ತ ಕೋರ್ಸ್ ಪೂರೈಸುವ ವಿದ್ಯಾರ್ಥಿಗಳು ಗಮನ ಹರಿಸಬೇಕು. ಇನ್ನು ಈ ಯೋಜನೆಯನ್ನು ನಮ್ಮ ಬ್ಯಾಂಕಿನ 9 ಜಿಲ್ಲೆಗಳ ಕಾರ್ಯ ಕ್ಷೇತ್ರದಲ್ಲಿರುವ ಎಲ್ಲ ಪಾಲಿಟೆಕ್ನಿಕ್ ಮತ್ತು ಐಟಿಐ ಕಾಲೇಜ್​ಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಬಸವರೆಡ್ಡಿ ಐಟಿಐ ಸಂಸ್ಥಾಪಕ ಅಧ್ಯಕ್ಷ ಶಂಕರ ಬಸವರೆಡ್ಡಿ ಮಾತನಾಡಿ, ಬದಲಾಗುತ್ತಿರುವ ವಿದ್ಯಮಾನದಲ್ಲಿ ಸ್ವ ಉದ್ಯೋಗಕ್ಕೆ ಅವಕಾಶಗಳು ಹೆಚ್ಚುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಉನ್ನತ ಉದ್ದೇಶ ಹೊಂದುವ ದಾರಿಯಲ್ಲಿ ಹೆಚ್ಚಿನ ಸವಾಲು ಸ್ವೀಕರಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯು ಶಶಿಕಲಾ ಬಸವರೆಡ್ಡಿ, ಕೆವಿಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣರಾಜ ಅಡಿಗ, ಸಹಾಯಕ ಮಹಾಪ್ರಬಂಧಕ ಶ್ರೀಧರ ಎನ್., ರುಡ್​ಸೆಟ್ ಸಂಸ್ಥೆ ನಿರ್ದೇಶಕ ರಾಜೇಂದ್ರ ಕಗ್ಗೋಡಿ, ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ, ಇತರರು ಇದ್ದರು.