ಯಾದಗಿರಿ: ವಿಕಲಚೇತನರ ಬಗ್ಗೆ ಸಹಾನುಭೂತಿ ಅಥವಾ ಅನುಕಂಪ ತೋರೆದೆ ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ತಾಪಂ ಇಒ ಮಲ್ಲಿಕಾರ್ಜುನ ತಿಳಿಸಿದರು.
ವಡಿಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ದಿ.ಅಸೋಸಿಯೇಶನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ ಸಂಸ್ಥೆಯಿಂದ ವಿಕಲಚೇತನರಿಗೆ ವೀಲ್ಚೇರ್ಗಳನ್ನು ವಿತರಿಸಿ ಮಾತನಾಡಿ, ದೇಹದಲ್ಲಿ ಒಂದು ಅಂಗ ಊನವಾದ ಮಾತ್ರಕ್ಕೆ ಅವರಲ್ಲಿ ಪ್ರತಿಭೆ ಇಲ್ಲ ಎಂದು ತಿಳಿದುಕೊಳ್ಳಬಾರದು ಎಂದರು. ವಿಕಲಚೇತನರ ಆರೈಕೆ ಮತ್ತು ಅಭಿವೃದ್ಧಿಗಾಗಿ ಎಪಿಡಿ ಸಂಸ್ಥೆ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂಥ ಸಮಾಜಮುಖಿ ಕಾರ್ಯಗಳು ಸದಾಕಾಲ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಸರ್ಕಾರಸಹ ವಿಕಲಚೇತನರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ಅಶೋಕ ಸಾಹು ಕರಣಿಗಿ, ಶರಣು ಇಟಗಿ, ಸಂಸ್ಥೆ ವಿರುಪಾಕ್ಷಿ ಮಾಲೀ ಪಾಟೀಲ್, ಡಾ.ಜಗದೀಶ್ವರಿ, ಅಂಜನೇಯ, ಶಾಂತಲಿಂಗ ಇದ್ದರು.