ಮೈಸೂರು: ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವುದರಿಂದ ಜನಸಾಮಾನ್ಯರ ಕೆಲಸಗಳಿಗೆ ತೊಂದರೆಯಾಗಿದೆ.
ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳು ಫೆ.10ರಿಂದ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಇದು ಗ್ರಾಮ ಮಟ್ಟದಲ್ಲಿ ಕಂದಾಯ ಇಲಾಖೆಯ ವಿವಿಧ ಸೇವೆಗಳು ಸ್ಥಗಿತಗೊಂಡಿವೆ, ಇದರಿಂದ ಜನರು ಪರದಾಡುತ್ತಿದ್ದಾರೆ.
ರಾಜ್ಯದ ಎಲ್ಲ ತಾಲೂಕು ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಸ್ಪಂದನೆ ವ್ಯಕ್ತವಾಗುತ್ತಿಲ್ಲ.
ಜಾತಿ, ಆದಾಯ ಪ್ರಮಾಣ ಪತ್ರ, ಪೌತಿ ಖಾತೆ, ಖಾತೆಗಳ ಬದಲಾವಣೆ, ಕಂದಾಯ ಪಾವತಿಸಲು, ವಾಸಸ್ಥಳ ದೃಢೀಕರಣ ಪತ್ರ ಪಡೆಯಲು ಸೇರಿದಂತೆ ಇನ್ನಿತರ ಸೇವೆ ಪಡೆಯಲು ಗ್ರಾಮ ಆಡಳಿತ ಅಧಿಕಾರಿಗಳು ಅಲಭ್ಯರಾಗಿದ್ದಾರೆ. ನಾಡಕಚೇರಿಯಲ್ಲಿ ಸೇವೆ ಲಭ್ಯವಿದ್ದರೂ ಜನರು ಪಡೆಯಲಾಗುತ್ತಿಲ್ಲ.
ಬೇಡಿಕೆಗಳು: ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವ ಇ-ಪೌತಿ ಖಾತಾ ಆಂದೋಲನ ಕೈ ಬಿಡಬೇಕು ಎಂದು ಗ್ರಾಮ ಆಡಳಿತ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶವನ್ನು ಈ ಕೂಡಲೇ ಹಿಂಪಡೆಯುವುದು. ಸುಸಜ್ಜಿತವಾದ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಕುರ್ಚಿ ಮತ್ತು ಅಲ್ಮೆರಾ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್, ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕಾೃನರ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರ ಆಗ್ರಹವಾಗಿದೆ.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು. ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟರೆ 50 ಲಕ್ಷ ರೂ. ಪರಿಹಾರ, 3 ಸಾವಿರ ರೂ. ಆಪತ್ತಿನ ಭತ್ಯೆ, ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲ ನೌಕರರಿಗೆ ತಿಂಗಳ ವೇತನವನ್ನು ಹೆಚ್ಚುವರಿ ಮಾಡಿ ಆದೇಶಿಸುವುದು. ಪ್ರಯಾಣಭತ್ಯೆಯನ್ನು 500ರಿಂದ 5 ಸಾವಿರ ರೂ.ಗೆ ಏರಿಸಬೇಕು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಿಸಬೇಕು. ಶಿಷ್ಟಾಚಾರ ಕೆಲಸದಿಂದ ಕೈಬಿಡಬೇಕು. ದಫ್ತರ್ ಹಾಗೂ ಜಮಾಬಂದಿಯನ್ನು ರದ್ದುಪಡಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
ರೈತರಿಗೆ ತೊಂದರೆ
ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಗ್ರಾಮಾಂತರದ ಪ್ರದೇಶದ ಜನರು ಮತ್ತು ರೈತರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ತಿಳಿಸಿದ್ದಾರೆ.
ಕಂದಾಯ ಇಲಾಖೆ ಜನ ಸಾಮಾನ್ಯರ ಕೆಲಸಗಳಿಗೆ ಅವಿಭಾಜ್ಯ ಅಂಗವಾಗಿದೆ. ಎಲ್ಲ ಇಲಾಖೆಗಳ ಮಾತೃ ಇಲಾಖೆಯೂ ಆಗಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಮಾತುಕತೆಗೆ ಮುಂದಾಗದ ಸರ್ಕಾರ
ಪ್ರತಿಭಟನಾನಿರತ ಗ್ರಾಮ ಆಡಳಿತಾಧಿಕಾರಿಗಳೊಂದಿಗೆ ಸರ್ಕಾರವೂ ಈವರೆಗೆ ಮಾತುಕತೆಗೆ ಮುಂದಾಗಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ ಅವರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ರಾಜ್ಯದ 9,839 ಆಡಳಿತಾಧಿಕಾರಿಗಳನ್ನು ಅಮಾನತು ಮಾಡುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಕ್ರಮವಹಿಸಿಲ್ಲ. ಪರಿಸ್ಥಿತಿ ಬಿಗಡಾಯಿಸುವ ಮೊದಲೇ ಸಮಸ್ಯೆ ಇತ್ಯರ್ಥಪಡಿಸಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 8 ದಿನಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಆದರೆ, ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ನಮ್ಮ ಸಮಸ್ಯೆಗಳನ್ನೂ ಆಲಿಸುತ್ತಿಲ್ಲ. ಹೀಗಾಗಿ, ಪ್ರತಿಭಟನೆಯನ್ನು ಮುಂದುವರಿಸಲಾಗುತ್ತಿದೆ. ಕುಮಾರ್, ಸರಗೂರು ತಾಲೂಕಾಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ.