ರಾಣೆಬೆನ್ನೂರ: ತಾಲೂಕಿನ ತುಮ್ಮಿನಕಟ್ಟಿಯಿಂದ ಗುತ್ತಲದವರೆಗೆ ಹೊನ್ನಾಳಿ-ಗದಗ ರಾಜ್ಯ ಹೆದ್ದಾರಿ ತೀರಾ ಹದಗೆಟ್ಟಿದ್ದು, ಸವಾರರು ಅಂಗೈಯಲ್ಲಿ ಜೀವ ಹಿಡಿದು ವಾಹನ ಓಡಿಸುವ ದುಸ್ಥಿತಿ ಎದುರಾಗಿದೆ.
ಸರ್ಕಾರ ಈ ರಸ್ತೆಯನ್ನು ರಾಜ್ಯ ಹೆದ್ದಾರಿ ಎಂದು ಘೊಷಿಸಿ ಹಲವಾರು ವರ್ಷ ಕಳೆದಿದೆ. ತುಮ್ಮಿನಕಟ್ಟಿಯಿಂದ ಗುತ್ತಲವರೆಗೆ ಒಟ್ಟು 55 ಕಿ.ಮೀ. ಇದೆ. ರಸ್ತೆ ಕಿರಿದಾಗಿದ್ದು, ಸಂಚಾರಕ್ಕೆ ತಾಪತ್ರಯವಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಕಳೆದ ಮಾರ್ಚ್ 12ರಂದು ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಗುತ್ತಿಗೆದಾರರು ಕೆಲಸಗಾರರ ಕೊರತೆ ಹೇಳಿ ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಅಪಾಯಕಾರಿ ರಸ್ತೆ...
ಈ ರಸ್ತೆಯು ಪ್ರಸಿದ್ಧ ದೇವಸ್ಥಾನಗಳಾದ ದೇವರಗುಡ್ಡ, ಮೈಲಾರ, ಕುರುವತ್ತಿ, ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಸೇರಿ ವಿವಿಧ ಧಾರ್ವಿುಕ ಕ್ಷೇತ್ರಗಳಿಗೆ ಹಾಗೂ ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ನಿತ್ಯವೂ ಕಾರು, ಬಸ್, ಲಾರಿ ಹಾಗೂ ಬೈಕ್ಗಳು ಸೇರಿ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಕಿರಿದಾಗಿದ್ದರಿಂದ 2018ರಿಂದ ಈಚೇಗೆ ದೇವರಗುಡ್ಡ-ಚೌಡಯ್ಯದಾನಪುರ ಕ್ರಾಸ್ವರೆಗೆ 50ಕ್ಕೂ ಅಧಿಕ ಅಪಘಾತ ಪ್ರಕರಣ ದಾಖಲಾಗಿವೆ. 20ಕ್ಕೂ ಅಧಿಕ ಬೈಕ್ ಸವಾರರು ಮೃತಪಟ್ಟಿದ್ದಾರೆ.
ಕೆಲವೆಡೆ ಡಾಂಬರು ರಸ್ತೆ ಕನಿಷ್ಠ ಒಂದು ಅಡಿಯಷ್ಟು ಎತ್ತರವಿರುವ ಕಾರಣ ಬೈಕ್ ಹಾಗೂ ಕಾರುಗಳನ್ನು ರಸ್ತೆಯಿಂದ ಕೆಳಗಿಳಿಸಲು ಆಗದ ಸ್ಥಿತಿಯಿದೆ. ಒಂದು ವೇಳೆ ಕೆಳಗಿಳಿಸಿದರೂ ಮತ್ತೆ ಮೇಲೆ ಹತ್ತಲು ಕಿ.ಮೀ.ಗಟ್ಟಲೇ ಸಾಗಬೇಕು.
ಸದ್ಯ ಮಳೆಯಾಗುತ್ತಿರುವ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹೀಗಾಗಿ ಸವಾರರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ರಾಜ್ಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೂಡಲೆ ರಸ್ತೆ ದುರಸ್ತಿ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂಬುದು ವಾಹನ ಸವಾರರ ಆಗ್ರಹವಾಗಿದೆ.
ತಾಲೂಕಿನಲ್ಲಿ ಹಾದು ಹೋಗಿರುವ ಗದಗ-ಹೊನ್ನಾಳಿ ರಸ್ತೆ ಅಭಿವೃದ್ಧಿಗಾಗಿ ಬಹಳಷ್ಟು ಹೋರಾಟ ನಡೆದ ಬಳಿಕ ಇದೀಗ ವಿಸ್ತರಣಗೆ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಹೀಗಾಗಿ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಳೆಯಿಂದ ಬಿದ್ದಿರುವ ಗುಂಡಿಗಳನ್ನಾದರೂ ತಾತ್ಕಾಲಿಕವಾಗಿ ಮುಚ್ಚಬೇಕು. ನಂತರದಲ್ಲಿ ಅಗಲೀಕರಣ ಕಾಮಗಾರಿಯನ್ನು ತ್ವರಿತಗೊಳಿಸಬೇಕು. | ಬೀರೇಶ ಎಚ್., ಕೆರಿಮಲ್ಲಾಪುರ ಗ್ರಾಮಸ್ಥ
ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಕಳೆದ ಮಾರ್ಚ್ 12ಕ್ಕೆ ಚಾಲನೆ ನೀಡಲಾಗಿದೆ. ಆದರೆ, ಕರೊನಾ ಲಾಕ್ಡೌನ್ ಘೊಷಣೆಯಾಗಿದ್ದರಿಂದ ಕೆಲಸಗಾರರ ಕೊರತೆ ಎದುರಾಗಿ ವಿಳಂಬವಾಗಿದೆ. ಸದ್ಯ ಸಂಪೂರ್ಣ ರಸ್ತೆ ಹದಗೆಟ್ಟ ಕಡೆಗಳಲ್ಲಿ ರಿಪೇರಿ ಕಾರ್ಯ ನಡೆದಿದೆ. ಮುಂದಿನ ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಸ್ತರಣೆ ಕಾಮಗಾರಿ ನಡೆಯುವುದು. | ಆನಂದ, ಕಾರ್ಯನಿರ್ವಾಹಕ ಇಂಜಿನಿಯರ್, ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ