ಹನೂರಿನಲ್ಲಿಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿರುವುದು. 
ಜಿಲ್ಲೆ

ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್

ಹನೂರು: ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ವಾಹನಗಳು ಸಂಚರಿಸಿದ್ದರಿಂದ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ದೀಪಾವಳಿ ಜಾತ್ರೆ ಹಾಗೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಹನೂರಿನ ಮೂಲಕ ಮ.ಬೆಟ್ಟಕ್ಕೆ ಹೆಚ್ಚಿನ ವಾಹನಗಳು ಸಂಚರಿಸಿದವು. ಇದರಿಂದಾಗಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಅದರಲ್ಲೂ ಕಿರಿದಾದ ರಸ್ತೆಯನ್ನು ಹೊಂದಿರುವ ಗುಪ್ತ ಮೆಡಿಕಲ್‌ನಿಂದ ತಟ್ಟೆಹಳ್ಳದ ಸೇತುವೆವರೆಗೆ ಆಗ್ಗಾಗ್ಗೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಸಂಚಾರ ನಿಯಂತ್ರಣಕ್ಕಾಗಿ ನಿಯೋಜಿಸಲ್ಪಟ್ಟ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಟ್ರಾಫಿಕ್ ಜಾಮ್‌ನಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಮ.ಬೆಟ್ಟಕ್ಕೆ ತೆರಳುವ ಭಕ್ತರು ಕಿರಿಕಿರಿ ಅನುಭವಿಸಿದರಲ್ಲದೆ, ಸಾರ್ವಜನಿಕರು ಸಂಚರಿಸಲು ಹೆಣಗಾಡಬೇಕಾಯಿತು.