ಮೈಸೂರು
ಭಾರತೀಯ ಕಲಾ ಶ್ರೀಮಂತಿಕೆಯಲ್ಲಿ ಕರ್ನಾಟಕ ಹಾಗೂ ಭಾರತೀಯ ರಾಜಮನೆತನಗಳು ವಾಸ್ತುಶಿಲ್ಪಗಳ ನಿರ್ಮಾಣದ ಮೂಲಕ ನೀಡಿರುವ ಕೊಡುಗೆ ಅಪಾರ ಎಂದು ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಎನ್.ಮೋಹನ್ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ವಾಸ್ತುಶಿಲ್ಪ ಕಲೆ: ಒಂದು ಐತಿಹಾಸಿಕ ಒಳನೋಟ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಸಿಂಧೂ ಬಯಲಿನ ನಾಗರಿಕತೆಯಿಂದ ಭಾರತೀಯರ ವಾಸ್ತುಶೈಲಿಯ ಪ್ರಕಾರವು ಆರಂಭಗೊಂಡಿತು. ಅಲ್ಲಿಂದ ಮುಂದೆ ಮೌರ್ಯರು ಮತ್ತು ಗುಪ್ತರ ಕಾಲದಲ್ಲಿ ಉತ್ತರ ಭಾರತದಲ್ಲಿ ನಾಗರ ಕಲಾಶೈಲಿಯು ಅಸ್ತಿತ್ವಕ್ಕೆ ಬಂದು ಅನೇಕ ದೇವಾಲಯಗಳು, ಬೌದ್ಧಸ್ತೂಪಗಳು, ಜೈನಬಸದಿಗಳು ಸೇರಿದಂತೆ ಭವ್ಯವಾದ ಅರಮನೆಗಳು ನಿರ್ಮಾಣಗೊಂಡವು ಎಂದರು.
ದಕ್ಷಿಣ ಭಾರತದಲ್ಲಿ ಪಲ್ಲವರ ಕಾಲದಲ್ಲಿ ದ್ರಾವಿಡ ಕಲಾಶೈಲಿಯೂ ಉಗಮಗೊಂಡು ಚೋಳರು ಸೇರಿದಂತೆ ಕರ್ನಾಟಕದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರ ಕಾಲದಲ್ಲಿ ಹಲವು ಪ್ರಸಿದ್ಧ ದೇವಾಲಯಗಳು ನಿರ್ಮಾಣವಾದವು.
ವಿಶೇಷವಾಗಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳು ಸಮ್ಮಿಲನಗೊಂಡು ನೂತನ ಶೈಲಿಯು ಅಸ್ತಿತ್ವಕ್ಕೆ ಬಂದು ನೂರಾರು ವಿಭಿನ್ನವಾದ ಮತ್ತು ಆಕರ್ಷಣೀಯವಾದ ದೇವಾಲಯಗಳು ನಿರ್ಮಾಣವಾಗಿವೆ. ವಿಜಯನಗರದ ಅರಸರ ಕಾಲದಲ್ಲಿ ದ್ರಾವಿಡ ಕಲಾಶೈಲಿಯು ದಕ್ಷಿಣ ಭಾರತದಲ್ಲಿ ಪರಾಕಾಷ್ಠೆಯ ಹಂತವನ್ನು ತಲುಪಿತು ಎಂದು ತಿಳಿದರು.
ಅಂದಿನ ಅದ್ಭುತ ಶಿಲ್ಪಕಲಾ ಮತ್ತು ವಾಸ್ತುತಂತ್ರಜ್ಞಾನ ಹಾಗೂ ಶಿಲ್ಪಿಗಳ ಶಿಲ್ಪಕಲಾ ಕೌಶಲದ ಪ್ರೌಢಿಮೆಯನ್ನು ಸ್ಮರಿಸಿ ಶ್ಲಾಘಿಸಿದರು. ಕರ್ನಾಟಕದ ವಿವಿಧ ರಾಜಮನೆತನಗಳ ಕಾಲದಲ್ಲಿ ನಿರ್ಮಾಣಗೊಂಡ ವಿವಿಧ ದೇವಾಲಯಗಳ ವಾಸ್ತುಶೈಲಿಗಳ ವಿವಿಧ ಹಂತಗಳನ್ನು ಛಾಯಾ ಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಚ್.ಶ್ರೀಧರ, ಅಧ್ಯಾಪಕರಾದ ಎ.ಆರ್.ನಂದೀಶ್, ಎನ್.ಜಯಲಕ್ಷ್ಮೀ ಇದ್ದರು.