ಜಿಲ್ಲೆ

ವಾಸ್ತವಿಕತೆಯಿಂದ ಬದುಕು ನಡೆಸಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಜಗದ್ಗುರುತ್ವ ಪ್ರತಿಪಾದನೆಯಲ್ಲಿ ಮಂಗಲಾಷ್ಟಕದ ಯೋಗದಾನ ವಿಶಿಷ್ಟವಾಗಿದೆ. ವಿಶಿಷ್ಟ ವಿಧಾನದಿಂದ ಈ ಚಿಕ್ಕ-ಚೊಕ್ಕ ಪುಸ್ತಕ ರೂಪುಗೊಂಡಿದೆ. ರಾಗಸಂಗೀತದಿಂದ ಇದನ್ನು ಹಾಡಿದಾಗ ಕರ್ಣಾನಂದವಾಗುತ್ತದೆ ಎಂದು ಆರ್ಷವಿದ್ಯಾ ವಿಕಾಸ ಆಶ್ರಮದ ಸ್ವಾತ್ಮನಿಷ್ಠಾನಂದ ಸರಸ್ವತಿ ಮಾತಾಜಿ ಅಭಿಪ್ರಾಯಪಟ್ಟರು.
ವಿದ್ಯಾಗಿರಿಯ ಶಂಕರಮಠದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ಹಾಗೂ ಸಂಸ್ಕೃತ-ಸಂಗೀತ ವಿದ್ವಾನ್ ಡಾ. ಕೆ ಗಣಪತಿ ಭಟ್ಟ ಸಂಪಾದಿತ ‘ಸಂಗೀತ ಮಂಗಲಾಷ್ಟಕ’ ಕನ್ನಡ ಆವೃತ್ತಿ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಉತ್ತಮ ಗೃಹಿಣಿಯೊಬ್ಬಳು ಭಾರತೀಯ ಸಂಸ್ಕೃತಿಯ ಶಿಕ್ಷಕಿಯಾಗಬೇಕಾದರೆ ಮಂಗಲಾಷ್ಟಕ ಉಪಕಾರಿ. ಧರ್ಮ, ಮೋಕ್ಷ ಎಂಬ ಬೇಲಿ ಮಧ್ಯೆ ಅರ್ಥ-ಕಾಮಗಳೆಂಬ ಸಂಪತ್ತು ಗಳಿಸಬೇಕು. ಅನುಕರಣೆಯ ಜೀವನಶೈಲಿ ಬಿಟ್ಟು ವಾಸ್ತವಿಕತೆಯಿಂದ ಜೀವಿಸುವುದನ್ನು ಕಲಿಯಬೇಕು ಎಂದರು.
ರಾಜೀವ ಪಾಟೀಲ ಕುಲಕರ್ಣಿ ಮಾತನಾಡಿ ಡಾ. ಗಣಪತಿ ಭಟ್ಟ ಕಷ್ಟಪಟ್ಟು ಅರ್ಥಸಹಿತ ಮಂಗಲಾಷ್ಟಕ ಪುಸ್ತಕ ಸಿದ್ಧಪಡಿಸಿದ್ದರಿಂದ ಧಾರ್ಮಿಕ ಸಮಾರಂಭಗಳಲ್ಲಿ ಪುರೋಹಿತರಾದವರು ಒಂದೆರಡು ಶ್ಲೋಕಗಳ ಅರ್ಥವನ್ನು ತಿಳಿಸಿದಲ್ಲಿ ಯಜಮಾನರ ಶ್ರದ್ಧೆ ಹೆಚ್ಚುವುದರಲ್ಲಿ ಯಾವ ಸಂದೇಹವೂ ಇಲ್ಲ. ಕತಗಾಲದಂತಹ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಗ್ರಂಥಪ್ರಕಟಣೆಯೊಂದಿಗೆ ದೇಶದ ವಿವಿಧೆಡೆ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮ ಸಂಘಟಿಸುತ್ತಿರುವ ಅವರು ಪರಿಪೂರ್ಣ ಆದರ್ಶವ್ಯಕ್ತಿಯಾಗಿದ್ದಾರೆ ಎಂದರು.
ಎ.ಆರ್. ಸುಬ್ಬರಾವ್ ಪುಸ್ತಕ ಪರಿಚಯಿಸಿದರು. ಸೌಂದರ್ಯ ಲಹರಿ ಮಹಿಳಾ ಮಂಡಳ ಸದಸ್ಯರು ವಿವಿಧ ಸ್ತೋತ್ರ ಹಾಗೂ ಕಲಾಶ್ರೀ ಪ್ರಶಿಕ್ಷಿತ ಮಹಿಳೆಯರು ವಿವಿಧ ರಾಗಗಳಲ್ಲಿ ಮಂಗಲಾಷ್ಟಕ ಪ್ರಸ್ತುತಪಡಿಸಿದರು.
ಡಾ ಗಣಪತಿ ಭಟ್ಟ, ಅರಕಲಗೂಡು ರಾಮಕೃಷ್ಣಯ್ಯ, ಶೈಲಾ ಬಿರಾದಾರ, ಸುವರ್ಣಾ ದೇಸಾಯಿ, ವಿಜಯಾ ನಾಯಕ, ಶಾರದಾ ಕುಲಕರ್ಣಿ, ಅಶೋಕ ಕುಲಕರ್ಣಿ, ಬದರಿನಾರಾಯಣ, ಸಿ.ಎಸ್. ಚಂದ್ರಶೇಖರ, ರುಕ್ಮಿಣಿ ದೀಕ್ಷಿತ, ಸಂಗೀತಾ ಪಾಟಿಲ, ಸುನೀತಾ ಹೊಂಕಣ, ಸುಜಾತಾ ಕುಲಕರ್ಣಿ, ಲಕ್ಷ್ಮೀ ದೇಶಪಾಂಡೆ, ಎಚ್.ಎನ್. ಲಕ್ಷ್ಮೀಕಾಂತ, ಇತರರು ಇದ್ದರು.
ಪ್ರಜ್ಞಾ ಕುಲಕರ್ಣಿ ಸ್ವಾಗತಿಸಿದರು. ಪರೀಕ್ಷಿತ ಬಿ.ಎನ್. ವಂದಿಸಿದರು.