ಸೊರಬ: ಬಸವಾದಿ ಶಿವಶರಣರು ವಾಸ್ತವತೆಯಿಂದ ಬದುಕಿ ಸಮಾಜಕ್ಕೆ ಮಾರ್ಗದರ್ಶನ ನೀಡಿ ಸಮಾಜೋದ್ಧಾರ ಮಾಡುವ ಗುರಿ ಹೊಂದಿದ್ದರು ಎಂದು ಜಡೆ ಹಿರೇಮಠ -ಸಮಾಧಾನ ಮಠ, ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ ಅಕ್ಕನ ಬಳಗ ಮತ್ತು ಸೊರಬ ಟೌನ್ ವೀರಶೈವ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಾದಿ ಶಿವಶರಣರು ಅತಿಶಯ ಶಕ್ತಿಯಿಂದ ಬದುಕನ್ನು ಕಟ್ಟಿಕೊಳ್ಳಲಿಲ್ಲ. ವಾಸ್ತವತೆಯಿಂದ ಬದುಕು ಕಂಡುಕೊಂಡರು. ಅನಾಚಾರ ಮಾಡಿ ಆಚಾರದ ಮಾತುಗಳನ್ನಾಡಿದರೆ ಪುಣ್ಯ ಲಭಿಸಲು ಸಾಧ್ಯವೇ? ಭಗವಂತನು ನಮ್ಮನ್ನು ಸುಂದರವಾದ ಪರಿಸರದಲ್ಲಿ ಹುಟ್ಟಿಸಿದ್ದಾನೆ ಎಂದರು.
ಭೃಂಗೀಶ್ವರ ಬೃಹನ್ಮಠ ಸಂಸ್ಥಾನದ ಗುರು ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ಪುಣ್ಯದ ಕೆಲಸ ಮಾಡದೆ ಫಲವನ್ನು ಬಯಸುತ್ತೇವೆ. ಗುರುಗಳ ಮಾರ್ಗದರ್ಶನದಲ್ಲಿ ಅಕ್ಕನ ಬಳಗದವರು ಶ್ರಾವಣ ಸಂಜೆ ಕಾರ್ಯ ಮಾಡುವ ಮೂಲಕ ಪುಣ್ಯದ ಫಲವನ್ನು ನೀವು ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಹಿರಿಯರು ಕಟ್ಟಿಕೊಟ್ಟಿರುವ ಸಂಸ್ಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಡಾ. ಶ್ರೀ ಗುರುಬಸವ ಸ್ವಾಮೀಜಿ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ವಾಣಿಜ್ಯ ತೆರಿಗೆ ಅಕಾರಿ ಭುವನೇಶ್ವರಿ ಪಾಟೀಲ್‌ಶಿರಸಿ, ಶಿಮುಲ್ ನಿರ್ದೇಶಕ ದಯಾನಂದ ಗೌಡ ತ್ಯಾವಗೋಡು, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ಸುಶೀಲಮ್ಮ, ನಟರಾಜ ಉಪ್ಪಿನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಗುರು ಕುಮಾರ್ ಪಾಟೀಲ್, ಶಿರಸಿ ಘಟಕದ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಅಂಕರವಳ್ಳಿ, ಉದ್ಯಮಿ ನಾಗರಾಜ್ ಗುತ್ತಿ, ಈರೇಶಗೌಡ, ನಿಜಗುಣ ಚಂದ್ರಶೇಖರ್, ಶಿವಯೋಗಿ, ಗಂಗಾಧರ, ಹಾಲೇಶ್ ನವುಲೆ ಇತರರಿದ್ದರು.