ಹೊಳೆನರಸೀಪುರ: ಆರ್ಯವೈಶ್ಯ ಜನಾಂಗ ವಿವಿಧ ದೇಶಗಳಲ್ಲದೆ, ರಾಷ್ಟ್ರಾದ್ಯಂತ 1300ಕ್ಕೂ ಹೆಚ್ಚು ವಾಸವಿ ಕ್ಲಬ್‌ಗಳನ್ನು ಪ್ರಾರಂಭಿಸಿದ್ದು, ಸಮಾಜ ಸೇವಾ ಕಾರ್ಯಗಳ ಮೂಲಕ ಎಲ್ಲ ವರ್ಗದ ಜನರ ಗಮನ ಸೆಳೆದಿದೆ ಎಂದು ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಹೇಳಿದರು.
ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಮೈಸೂರಿನ ಸಂಗಂ ನೇತ್ರ ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ನೇತ್ರ ಚಿಕಿತ್ಸಾ ಉಚಿತ ಶಿಬಿರದಲ್ಲಿ ಮಾತನಾಡಿ, ವಿಶ್ವದ 16 ದೇಶಗಳಲ್ಲಿರುವ ನಮ್ಮ ಕ್ಲಬ್‌ನಲ್ಲಿ 1ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಸಮಾಜ ಸೇವೆಗಾಗಿ ಪ್ರತೀವರ್ಷ 30 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ಸರ್ಕಾರ ನಮಗೆ ನೀಡುವ ಅನುದಾನದಿಂದ ನಾವು ವಿದ್ಯಾರ್ಥಿ ಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದಿಲ್ಲ. ಆದ್ದರಿಂದ ನಾವು ಸಂಘ-ಸಂಸ್ಥೆಗಳ ಸಹಾಯ ಪಡೆದು ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ನಮ್ಮ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ತಂದುಕೊಡಬೇಕು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಲ್ಲ ಪ್ರಾಧ್ಯಾಪಕರು ಆಸಕ್ತಿಯಿಂದ ಕಲಿಸುತ್ತಿದ್ದೇವೆ. ವಾಸವಿ ಕ್ಲಬ್‌ನಿಂದ ಅಗತ್ಯ ಸಲಕರಣೆಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು.
ಪ್ರಾಧ್ಯಾಪಕ ಶಿವರಾಂ ಮಾತನಾಡಿ, ಸಮಾಜಸೇವೆ ಒಂದು ಅತ್ಯುತ್ತಮ ಪೂಜೆ. ನಾವು ಐಷಾರಾಮಿ ಜೀವನಕ್ಕೆ ಹೆಚ್ಚಿನ ಮಹತ್ವ ನೀಡದೆ ಸರಳ ಜೀವನವನ್ನು ನಡೆಸುತ್ತಾ ನಮ್ಮ ಸಂಪಾದನೆಯ ಕೆಲ ಭಾಗವನ್ನಾದರೂ ಸಮಾಜ ಸೇವೆಗೆ ಮುಡಿಪಾಗಿಡೋಣ ಎಂದರು.
ಎ.ಆರ್.ರವಿಕುಮಾರ್, ಎಸ್.ಗೋಕುಲ್, ರವಿಕೀರ್ತಿ, ಮಂಜುನಾಥ್‌ಗುಪ್ತಾ ಹಾಗೂ ಸದಸ್ಯರು ಭಾಗವಹಿಸಿದ್ದರು.