ಬಾಗಲಕೋಟೆ: ರಾಜ್ಯದ ಎಸ್ಸಿ,ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಲು ಸರ್ಕಾರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಿಂದ ಶನಿವಾರ ಸಂಜೆ ಸಂಭ್ರಮಾಚರಣೆ ನಡೆಯಿತು.
ವಾಲ್ಮೀಕಿ ಸಮುದಾಯದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ, ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಾಚರಣೆ ಮಾಡಿದರು. ಈ ವೇಳೆ ಮುಖಂಡರು ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ, ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ಮುಖಂಡರು ಕಳೆದ ೪೦ ವರ್ಷಗಳ ಸಮುದಾಯದ ಬೇಡಿಕೆ ಇಂದು ಮನ್ನಣೆ ಸಿಕ್ಕಿದೆ. ವಿವಿಧ ಹಂತಗಳಲ್ಲಿ ನಿರಂತರ ಹೋರಾಟ ಮಾಡಿದ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ರಾಜ್ಯದ ಸಮುದಾಯದ ಎಲ್ಲ ಮುಖಂಡರು ಹಾಗೂ ಸರ್ಕಾರದ ಒಳಗೂ ಮತ್ತು ಹೊರಗೂ ಮೀಸಲಾತಿಗಾಗಿ ಹೋರಾಟ ಮಾಡಿದ ಸಚಿವ ಶ್ರೀರಾಮುಲು, ಮಾಜಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ಶಾಸಕರು ಮಾಜಿ ಶಾಸಕರ ಶ್ರಮವಿದೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕ್ಯಾದಗೇರಿ, ಮುಖಂಡರಾದ ಶಂಭುಗೌಡ ಪಾಟೀಲ, ರಾಜು ನಾಯ್ಕರ, ಬಲ್ಲಿಸ್ವಾಮಿ ಸುರಪೂರ, ಸಿ.ವಿ.ಕೋಟಿ, ಹೇಮಂತ ಚೂರಿ ಸೇರಿದಂತೆ ಇತರರು ಇದ್ದರು.