ಮೈಸೂರು: ಮಹಾಕಾವ್ಯ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶ ಜನ ಸಾಮಾನ್ಯರನ್ನು ತಲುಪಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು
ಮೈಸೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ಓದುವ ಎಲ್ಲರಿಗೂ ರಾಮಾಯಣ ಹಾಗೂ ಮಹಾಭಾರತದ ಪರಿಚಯ ಹಾಗೂ ತಿಳವಳಿಕೆ ಇರಬೇಕು ಎಂದರು
ರಾಮಾಯಣ ಮತ್ತು ಮಹಾಭಾರತ ಭಾರತದ ಎರಡು ಪ್ರಮುಖ ಮಹಾಕಾವ್ಯಗಳು. ರಾಮಾಯಣ ಬರೆದ ವಾಲ್ಮೀಕಿಯನ್ನು ನಾವು ಆದಿಕವಿ ಎಂದು ಕರೆಯುತ್ತೇವೆ. ಪ್ರಪಂಚದ ಹಲವು ದೇಶದ ಸಹೃದಯರನ್ನು ರಾಮಾಯಣ ಗೆದ್ದಿದೆ. ಆದಿಕವಿ ವಾಲ್ಮೀಕಿ ಮಹಾನ್ ವ್ಯಕ್ತಿ. ವಾಲ್ಮೀಕಿ ತತ್ವಶಾಸ್ತ್ರಜ್ಞ, ತಪಸ್ವಿ, ಇತಿಹಾಸಕಾರ, ಸಮಾಜ ಸುಧಾರಕ, ಶೋಷಿತ ಜನಾಂಗದ ಹರಿಕಾರ. ವಾಲ್ಮೀಕಿ ಬರೆಯದ ವಿಷಯವಿಲ್ಲ. ತಮ್ಮ ಕೃತಿಯಲ್ಲಿ ತತ್ವ ಜ್ಞಾನದಿಂದ ಹಿಡಿದು ತಂತ್ರಜ್ಞಾನದ ಬಗ್ಗೆ ಬರೆದಿದ್ದಾರೆ ಎಂದರು.
ವಾಲ್ಮೀಕಿ ವಾಸ್ತವವಾದಿ. ಅಲ್ಲದೆ ಶ್ರೀರಾಮನ ಸಮಕಾಲೀನರಾದ ಕಾರಣ ರಾಮಾಯಣ ಬರೆಯಲು ಸಾಧ್ಯವಾಯಿತು. ರಾಮಾಯಣ ಕಾಲದ ಕಾವ್ಯವಾದರೂ ಎಲ್ಲ ಕಾಲಕ್ಕೂ ಸಲ್ಲುವಂತೆ ವಾಲ್ಮೀಕಿ ಬರೆದಿದ್ದಾರೆ. ಬೇಡ ಸಮುದಾಯಕ್ಕೆ ಸೇರಿದ ವಾಲ್ಮೀಕಿ ಅವರ ಮೂಲ ಹೆಸರು ರತ್ನಾಕರ. ವಾಲ್ಮೀಕಿ ರಾಮಾಯಣದಲ್ಲಿ ಸಕಲ ಜ್ಞಾನದ ಸಂಪತ್ತು ಅಡಕವಾಗಿದೆ ಎಂದರು
ರಾಮಾಯಣ ಹಾಗೂ ಭಗವದ್ಗೀತೆ ಹೆಚ್ಚು ಪ್ರಭಾವ ಬೀರಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳ ಅಧ್ಯಯನ ಕಾರ್ಯ ಕ್ಷೇತ್ರ ಯಾವುದೇ ಇರಲಿ. ಆದರೆ ರಾಮಾಯಣವನ್ನು ತಿಳಿದುಕೊಂಡಿರಬೇಕು. ಸುಧಾಮೂರ್ತಿ ಅವರು ಕಂಪ್ಯೂಟರ್ ಸೈನ್ಸ್ ಓದಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾದರೂ ಅವರ ಮೇಲೆ ರಾಮಾಯಣ, ಭಗವದ್ಗೀತೆ ಪ್ರಭಾವ ಬೀರಿದೆ. ಹೀಗಾಗಿ ಅವರು ಹೆಚ್ಚಿನ ಸಾಹಿತ್ಯ ಕೃಷಿ ಮಾಡಲು ಸಾಧ್ಯವಾಯಿತು. ಸರ್ ಸಿ.ವಿ.ರಾಮಣ್ಣ ವಿಜ್ಞಾನಿಯಾದರೂ ಸಂಗೀತದ ಜ್ಞಾನ ಇತ್ತು ಎಂದರು.
ಮೈವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷ್ಣ ಹೊಂಬಾಳು ಮಾತನಾಡಿ, ವಾಲ್ಮೀಕಿ ಸಾಹಿತ್ಯ ಲೋಕದ ವಿಶಿಷ್ಟ ಕೋಗಿಲೆ. ಕಾವ್ಯ ಪರಂಪರೆಯ ನಿರಂತರ ಗಂಗೆಯಾಗಿ ವಾಲ್ಮೀಕಿ ಉಳಿದುಕೊಂಡಿದ್ದಾರೆ. ನಾಟಕ, ಗ್ರಂಥಗಳ ಮೂಲಕ ವಾಲ್ಮೀಕಿ ಹಲವು ಕಡೆ ಜೀವಂತವಾಗಿದ್ದಾರೆ. ಬೋಜರಾಜ ತಮ್ಮ ಕಾವ್ಯದಲ್ಲಿ ವಾಲ್ಮೀಕಿ ಅವರನ್ನು ಗೀತ ರಘುಪುಂಗವ ಎಂದು ಬಣ್ಣಿಸುತ್ತಾರೆ. 24 ಸಾವಿರ ಶ್ಲೋಕಗಳು ರಾಮಾಯಣದಲ್ಲಿ ಇದೆ. ವಾಲ್ಮೀಕಿ ಋಷಿ, ಸಂಸ್ಕೃತ ಕವಿ. ರತ್ನಾಕರ ಇವರ ಜನ್ಮನಾಮ ಎಂದು ವಿವರಿಸಿದರು.
ಕುಲಸಚಿವ ಪ್ರೊ.ಆರ್.ಶಿವಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಅಧಿಕಾರಿ ಪ್ರೊ.ಎಸ್.ಮಹದೇವಮೂರ್ತಿ, ಪ್ರೊ.ರಾಮಶೇಷು ಸೇರಿದಂತೆ ಇತರರು ಇದ್ದರು.