ಕಲಬುರಗಿ: ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಕಡುಬಡತನದಲ್ಲಿ ಜನಿಸಿ ಜನರ ನೋವು ಅರಿತು ಸಮಾಜಕ್ಕೆ ಬೆಳಕಾಗಿ ಮಾಡಿದ ಸೇವೆ ಅವಿಸ್ಮರಣೀಯ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಜಿಲ್ಲೆಯ ವಾಡಿಯಲ್ಲಿ ಮಾರ್ಚ್ ೧೯ರಂದು ಸಾಹೇಬ್ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ನಡೆದ ವಾಲ್ಮೀಕಿ ನಾಯಕ ಅವರ ಮೂರನೇ ಪುಣ್ಯತಿಥಿ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕ ನಾಯಕನಾಗಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಂತರ ಶಾಸಕರಾಗಿ ಚಿತ್ತಾಪುರದಲ್ಲಿ ಬಡವರ, ದೀನದಲಿತರ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ರಾಮಲಾಲ್ ಮಹಾರಾಜರ ಪರಮ ಭಕ್ತರಾಗಿ ವಾಡಿಯಲ್ಲಿ ಸೇವಾಲಾಲï ಜಯಂತಿಯನ್ನು ಅದ್ದೂರಿಯಾಗಿ ನಡೆಸುವಲ್ಲಿ ವಾಲ್ಮೀಕಿ ನಾಯಕ ಅವರು ಆರ್. ಬಿ.ಚೌಹಾಣ್, ಡಾ.ರಾಮ ನೇತೃತ್ವದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಜನಪರ ಹೋರಾಟಗಾರನಾಗಿ ಬಡವರ ಕಣ್ಣೀರು ಒರೆಸಿದ ಜನನಾಯಕ. ಭೌತಿಕವಾಗಿ ನಮ್ಮ ಜತೆ ಇಲ್ಲದಿದ್ದರೂ ಅವರ ಆದರ್ಶ ಸದಾ ನಮ್ಮೊಂದಿಗೆ ಇರಲಿದೆ ಎಂದರು.
ಆರೋಗ್ಯ ಉಚಿತ ಶಿಬಿರಕ್ಕೆ ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿ, ಆಶೀರ್ವಚನ ನೀಡಿದರು. ವಿಠ್ಠಲ್ ನಾಯಕ್, ಶಿವಲಿಂಗಪ್ಪ ವಾಡೇದ್, ಲಿಂಗಾರೆಡ್ಡಿ ಶೇರಿ, ರಾಮಚರಣರೆಡ್ಡಿ, ಮೆಹಬೂಬ್‌ಸಾಬ್, ರಮೇಶ ಕಾರಬಾರಿ, ಕೃಷ್ಣಾ ನಾಯಕ್, ಬಾಬು ಮಿಯಾ, ಭೀಮಾರಾವ್ ದೋನಿ, ಸಿದ್ದಣ್ಣ ಕಲಶೆಟ್ಟಿ, ಭೀಮಶಾ ಜಿರಳ್ಳಿ, ಅಶೋಕ ಪವಾರ್, ಕಿಶನ್ ಜಾಧವ್, ಅಂಬಾದಾಸ್ ಜಾಧವ್, ಗಿರಿ ಮಲ್ಲಪ್ಪ ಕಟ್ಟಿಮನಿ ಇತರರಿದ್ದರು.