ಚಾಮರಾಜನಗರ: ರಾಮನ ಜೀವನ ಚರಿತ್ರೆಯನ್ನು ವಿವರಿಸುವ ರಾಮಾಯಣವನ್ನು ಬರೆದಂತಹ ಮಹಾನ್ ಮಹರ್ಷಿ ವಾಲ್ಮೀಕಿಯವರ ಜನ್ಮದಿನವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಲಾಗುತ್ತದೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ರುದ್ರಮೂರ್ತಿ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾಯಕ್ರಮದಲ್ಲಿ ಅವರು ಮಾತನಾಡಿದರು. ವಾಲ್ಮೀಕಿ ಮಹರ್ಷಿಗಳು ಆದಿ ಕವಿಯಾಗಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಅಶ್ವಿನಿ ಮಾಸದ ಪೂರ್ಣಿಮಾ ದಿನದಂದು ಬರುತ್ತದೆ. ಋಷಿ ಮತ್ತು ಕವಿ ಮಹರ್ಷಿ ವಾಲ್ಮೀಕಿ, ವಿಶೇಷವಾಗಿ ಅವರ ಮಹಾಕಾವ್ಯವಾದ ರಾಮಾಯಣದ ಮೂಲಕ ಹಿಂದು ಧರ್ಮಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಇವರನ್ನು ಪೂಜಿಸಲಾಗುತ್ತದೆ ಎಂದರು.
ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ಮಾತನಾಡಿ, ದೇಶದ ಎಲ್ಲ ಕಡೆಯಲ್ಲೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ನಮ್ಮ ದೇಶಕ್ಕೆ ಗ್ರಂಥಗಳನ್ನು ಕೊಡುಗೆಯಾಗಿ ನೀಡಿರುವ ಹಲವಾರು ಮಹನೀಯರಾದ ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಹಾಗೂ ಇನ್ನು ಮುಂತಾದ ಜಯಂತಿಗಳನ್ನು ಆಚರಿಸುತ್ತ ಬಂದಿದೆ. ಇದರ ಉದ್ದೇಶ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅವರ ಮಾರ್ಗದಲ್ಲಿ ನಡೆದರೆ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದರು.
ಸಂಸ್ಥೆಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರತ್ನಮ್ಮ, ಶಿಕ್ಷಕ ಕುಮಾರ್ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಎಸ್.ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕ ರಂಗಸ್ವಾಮಿ, ನಾಗರಾಜು, ಯಶಪಾಲ್, ಡಿ.ಎಸ್.ಪರಶಿವಮೂರ್ತಿ ಇದ್ದರು.