ಜಿಲ್ಲೆ

ವಾಲಿಬಾಲ್‌ಗೆ ನುಗ್ಗೆಹಳ್ಳಿ ಪ್ರಸಿದ್ಧಿ

ನುಗ್ಗೇಹಳ್ಳಿ: ವಾಲಿಬಾಲ್ ಕ್ರೀಡೆಯಲ್ಲಿ ನುಗ್ಗೆಹಳ್ಳಿ ಪ್ರಸಿದ್ಧಿ ಪಡೆದಿದೆ. ಹಾಗಾಗಿ, ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಸಲು ಸೂಕ್ತ ಸ್ಥಳವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.


ಇಲ್ಲಿನ ಪ್ರಸಿದ್ಧ ಯಂಗ್ ಸ್ಟಾರ್ಸ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.


ಹೊನ್ನಮಾರನಹಳ್ಳಿಯ ಸ್ವಾತಂತ್ರೃ ಹೋರಾಟಗಾರ ದಿವಂಗತ ಬೋರೇಗೌಡ ಅವರು ಉತ್ತಮ ವಾಲಿಬಾಲ್ ಕ್ರೀಡಾಪಟು. ಅವರು ಮೈಸೂರು ದಸರಾ ಕ್ರೀಡಾಕೂಟದಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ಸಂತೋಷಗೊಂಡ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಚಿನ್ನದ ಉಂಗುರವನ್ನೇ ಬಹುಮಾನವಾಗಿ ನೀಡಿದ್ದರು. ಆ ಕಾಲದಿಂದಲೂ ಅವರ ಮಗ ಗಂಗರಾಜ್ ಆಟಗಾರರೊಂದಿಗೆ ಯಂಗ್ ಸ್ಟಾರ್ಸ್ ವಾಲಿಬಾಲ್ ಕ್ಲಬ್‌ನಿಂದ ನೂರಕ್ಕೂ ಹೆಚ್ಚು ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿ ನುಗ್ಗೇಹಳ್ಳಿಗೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಕ್ರೀಡೆಗಳಿಂದ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ತೋಟಿ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ. ಸೋಮನಾಥ್, ಎನ್.ಎಸ್. ಪ್ರಕಾಶ್, ದೊರೆಸ್ವಾಮಿ ಎನ್. ಎಸ್. ಲಕ್ಷ್ಮಣ್, ಎನ್.ಡಿ. ಶಂಕರ್, ಕೆಎಸ್‌ಎಫ್‌ಸಿ ನಿವೃತ್ತ ನೌಕರ ಎನ್.ಡಿ.ಜಗದೀಶ್, ಶಿವಲಿಂಗೇಗೌಡ, ಎನ್.ಆರ್. ಸ್ವಾಮಿ, ಎನ್.ಸಿ. ಲಕ್ಷ್ಮೇಗೌಡ, ಲಕ್ಷ್ಮೇಶ್, ಮನೋಹರ್, ದೇವರಾಜ್, ನಟರಾಜ ಯಾದವ್, ಹೊನ್ನೇಗೌಡ ಯಾದವ್, ಬಾಬು ಜಾವೇದ್ ಇತರರು ಹಾಜರಿದ್ದರು.