ಜಿಲ್ಲೆ

ವಾಲಿಬಾಲ್ ಪಂದ್ಯಾವಳಿಯಲ್ಲಿ ಗೌತಮ್ ತಂಡ ತೃತೀಯ

Chamarajanagar

ಕೊಳ್ಳೇಗಾಲ: ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಳ್ಯ ಗ್ರಾಮದ ಗೌತಮ್ ತಂಡ ತೃತೀಯ ಸ್ಥಾನ ಗಳಿಸಿರುವುದಕ್ಕೆ ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ರವಿ ಮೆಚ್ಚುಗೆ ವ್ಯಕ್ತಪಡಿಸಿದರು.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ 2022-23ನೇ ಸಾಲಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿರುವ ಗೌತಮ್ ತಂಡದವರನ್ನು ಪಾಳ್ಯ ಗ್ರಾ.ಪಂ. ಕಚೇರಿ ಮುಂಭಾಗ ಬುಧವಾರ ಸನ್ಮಾನಿಸಿ ಮಾತನಾಡಿದರು.


ಗ್ರಾಮೀಣ ಕ್ರೀಡಾಕೂಟದ ಆಯೋಜನೆ ಸ್ಥಳೀಯ ಕ್ರೀಡಾಪಟುಗಳನ್ನು ಮುನ್ನೆಲೆಗೆ ತರಲು ಉತ್ತಮ ವೇದಿಕೆಯಾಗಿದೆ. ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಪಾಳ್ಯ ಗ್ರಾಮ ಗೌತಮ್ ತಂಡದ 12 ಕ್ರೀಡಾ ಪಟುಗಳು ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಅಂತೆಯೆ, ಜ.14 ಮತ್ತು 15 ರಂದು ನಡೆದ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ಸಾಧನೆದಿಂದ ನಮ್ಮ ಗ್ರಾಮವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿದಂತಾಗಿದೆ. ಪಾಳ್ಯ ಗ್ರಾಮದಲ್ಲಿ ವಾಲಿಬಾಲ್ ಕ್ರೀಡಾಸಕ್ತರು ಹೆಚ್ಚಿದ್ದು, ಇಂತಹ ಪ್ರತಿಭೆಗಳಿಗೆ ಸಾಧನೆ ಮಾಡಲು ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಮುಂದೆಯೂ ಕೆಲಸ ಮಾಡಲಾಗುವುದು ಎಂದು ಹೇಳಿದರು.


ಪಿಡಿಒ ಜುನೇದ್ ಅಹಮ್ಮದ್ ಮಾತನಾಡಿ, ಹಳ್ಳಿ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಂತೋಷದ ವಿಚಾರ ಎಂದರು
ಅಭಿನಂದನೆ: ಪಾಳ್ಯ ಗ್ರಾಮದ ಗೌತಮ್ ವಾಲಿಬಾಲ್ ತಂಡದ ನಾಯಕ ಸಚಿನ್, ಹಾಗೂ ಸಚಿನ್, ಶ್ರೀಧರ್, ಪುಟ್ಟರಾಜು, ಪರಮೇಶ್, ಸಂತೋಷ್, ಸುಭಾಶ್, ಸುದೀಪ್, ಸುಮನ್ ,ಪ್ರೀತಮ್, ಯೋಗೇಶ್, ಮಹದೇವ ಪ್ರಭು, ಮನೋಜ್ ಅವರನ್ನು ಅಭಿನಂದಿಸಲಾಯಿತು.


ಪಾಳ್ಯ ಗ್ರಾ.ಪಂ ಉಪಾಧ್ಯಕ್ಷೆ ಸುಮಾ, ಸದಸ್ಯರಾದ ಸೀಗಣ್ಣ, ಗೌರಯ್ಯ, ಜಗದೀಶ್ ನಾಯಕ, ರಾಜು, ಶಿವಮೂರ್ತಿ, ಶಿವಕುಮಾರ್ ಸ್ಚಾಮಿ, ಮಹದೇವಮ್ಮ, ಮಂಜುಳಾ, ಹೇಮಾವತಿ, ಶಿವಮ್ಮ, ಲಕ್ಷ್ಮೀ, ಚೈತ್ರಾ, ಗ್ರಾ.ಪಂ. ಕಾರ್ಯದರ್ಶಿ ಸಿದ್ದಯ್ಯ, ಸಿಬ್ಬಂದಿ ಶಿವಕುಮಾರ್, ಶಿವರುದ್ರ ಇದ್ದರು.