ಬೀದರ್: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆಗೆ ರಚಿಸಿದ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಬೀದರ್ ಜಿಲ್ಲಾಧ್ಯಕ್ಷರಾಗಿ ಬೀದರ್ ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಬಾಬು ವಾಲಿ ಹಾಗೂ ಗೌರವಾಧ್ಯಕ್ಷರಾಗಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಅಷ್ಟೂರ ನೇಮಕಗೊಂಡಿದ್ದಾರೆ.
ನಗರದಲ್ಲಿ ಬುಧವಾರ ಕರೆದಿದ್ದ ಕಕ ಉತ್ಸವ ಸಮಿತಿ ಅಧ್ಯಕ್ಷರಾದ ಎಂಎಲ್ಸಿ ಶಶೀಲ್ ಜಿ.ನಮೋಶಿ ನೇತೃತ್ವದ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ನಂತರ ಈ ಭಾಗಕ್ಕೆ 1948ರ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ದೊರೆಯಿತು. ಹೀಗಾಗಿ ಬರುವ ಸೆ.17ರಿಂದ ಒಂದು ವರ್ಷ ವಿವಿಧ ಕಾರ್ಯಕ್ರಮ ಆಯೋಜನೆಗೆ ಸಮಿತಿ ರಚಿಸಲಾಗಿದೆ. ಈ ಭಾಗದ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ರಚಿಸಿ ಪದಾಕಾರಿಗಳ ನೇಮಕ ಮಾಡಲಾಗುತ್ತಿದೆ ಎಂದು ನಮೋಶಿ ತಿಳಿಸಿದರು.
ಮೈಸೂರು ಉತ್ಸವ ಮಾದರಿಯಲ್ಲಿ ವರ್ಷವಿಡೀ ಈ ಭಾಗದ ಕಲೆ, ಸಂಸ್ಕೃತಿ, ಸಾಹಿತ್ಯ, ಶೈಕ್ಷಣಿಕ, ಇತಿಹಾಸ ಮತ್ತು ಅಭಿವೃದ್ಧಿಯ ವಿಷಯಗಳ ಮೇಲೆ ಬೆಳಕು ಚೆಲ್ಲುವಂಥ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಕ ಭಾಗದ ಸಚಿವರು, ಸಂಸದರು, ಶಾಸಕರನ್ನು ಒಳಗೊಂಡ ನಿಯೋಗ ಶೀಘ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಿದೆ ಎಂದರು.
ಪ್ರಮುಖರಾದ ಲಕ್ಷ್ಮಣ ದಸ್ತಿ, ಶಾಮರಾವ ಪ್ಯಾಟಿ, ಸಿದ್ದಾರಡ್ಡಿ, ಸೋಮಶೇಖರ ಪಾಟೀಲ್ ಗಾದಗಿ, ಸುರೇಶ ಚನ್ನಶೆಟ್ಟಿ, ಶಶಿ ಹೊಸಳ್ಳಿ, ಶಕುಂತಲಾ ಬೆಲ್ದಾಳೆ, ರಾಜೇಂದ್ರ ಗಾದಗೆ, ಹಾವಶೆಟ್ಟಿ ಪಾಟೀಲ್, ಶಿವರಾಜ ಕಣಜಿ, ಬಾಬು ದಾನಿ, ಶಿವಪುತ್ರ ವೈದ್ಯ, ಭಾರತಿ ವಸ್ತ್ರದ್, ಮಡಿವಾಳಪ್ಪ ಗಂಗಶೆಟ್ಟಿ, ದತ್ತಾತ್ರೇಯ ಬಾಚಿಪಳ್ಳಿ, ರಾಜಶೇಖರ ಮಂಗಲಗಿ, ಅಶೋಕ ಪಾಟೀಲ್, ಸೂರಜಸಿಂಗ್ ರಜಪುತ, ವಿಜಯಕುಮಾರ ಪಾಟೀಲ್ ಯರನಳ್ಳಿ, ಸಚ್ಚಿದಾನಂದ ಚಿದ್ರಿ, ರಾಜು ಬಿರಾದಾರ್, ವಿಕ್ರಮ ಮುದಾಳೆ ಇತರರಿದ್ದರು. ಶಿವಕುಮಾರ ಕಟ್ಟೆ, ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು.