ಜಿಲ್ಲೆ

ವಾರ್ಡ್‌ಗಳಲ್ಲಿ ತಪ್ಪದ ಮೂಲಸೌಕರ್ಯ ಸಮಸ್ಯೆ

ಚಾಮರಾಜನಗರ: ಜಿಲ್ಲಾ ಕೇಂದ್ರದ ನಗರಸಭೆ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ನಿತ್ಯವೂ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಚಾ.ನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳು ಇದ್ದು, ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಜಿಲ್ಲಾ ಕೇಂದ್ರಕ್ಕೆ ನೀರು ಪೂರೈಕೆ ಮಾಡುವ ಯಂತ್ರಗಳ ರಿಪೇರಿ ಹಾಗೂ ಇನ್ನಿತರೆ ಸಮಸ್ಯೆಗಳ ಕಾರಣಗಳಿಂದ ಕೆಲವು ವಾರ್ಡ್‌ಗಳಿಗೆ 15 ದಿನವಾದರೂ ಕುಡಿಯುವ ನೀರು ಪೂರೈಕೆಯಾಗದೇ ನಿವಾಸಿಗಳು ನಿರಂತರವಾಗಿ ಸಮಸ್ಯೆ ಅನುಭವಿಸುವಂತಾಗಿದೆ. ಇನ್ನು ಕೆಲವು ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಒಳಚರಂಡಿ ಕಾಮಗಾರಿಗಳು ಸಮರ್ಪಕವಾಗಿ ನಡೆಯದೇ ಇರುವುದರಿಂದ ಸಾರ್ವಜನಿಕರಿಗೆ ಪದೇಪದೇ ಕಿರಿಕಿರಿ ಅನುಭವಿಸುವಂತಾಗಿದೆ.

ಕೆಲವು ವಾರ್ಡ್‌ಗಳ ರಸ್ತೆಗಳಲ್ಲಿ ಮಳೆ ಬಂದರಂತೂ ಸಂಚಾರ ದುಸ್ತರವಾಗುತ್ತಿದೆ. ಹೆಚ್ಚಿನ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಪ್ರತಿಯೊಬ್ಬರಿಗೂ ತಲೆನೋವಾಗಿ ಪರಿಣಮಿಸಿದ್ದು, ಈ ಕುರಿತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೆಚ್ಚಿನ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಕಾಟಾದಿಂದ ವೃದ್ಧರು ಮತ್ತು ಮಕ್ಕಳು ಓಡಾಡಲು ಎದುರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯಲ್ಲಿ ಖಾತೆ, ಇ-ಸ್ವತ್ತು, ಕಂದಾಯ ಹಾಗೂ ಇನ್ನಿತರೆ ಕೆಲಸಗಳು ವಿಳಂಬವಾಗುವುದು ಪುನರಾವರ್ತನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಲೋಕಾಯುಕ್ತರಿಗೂ ದೂರು ಸಲ್ಲಿಸಿದ್ದಾರೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರಸಭೆಗೆ ಲೋಕಾಯುಕ್ತರ ತಂಡ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದರು. ಈಗಲೂ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದ್ದು, ನಗರದ ವಾರ್ಡ್‌ಗಳಲ್ಲಿ ಕಂಡು ಬರುತ್ತಿರುವ ಮೂಲಸೌಕರ್ಯ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

*ಸಮಸ್ಯೆಗಳ ಆಗರವಾಗಿದೆ

ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಕುಡಿಯುವ ನೀರು, ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಸಮರ್ಪಕವಾಗಿ ನಡೆಯದೇ ಸಾರ್ವಜನಿಕರು ನಿತ್ಯವೂ ಸಮಸ್ಯೆವನ್ನು ಎದುರಿಸುವಂತಾಗಿದೆ. ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಈ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರವನ್ನು ಕೈಗೊಂಡಿದ್ದರು. ಅದಲ್ಲದೇ ಸಾರ್ವಜನಿಕರು ನಿರಂತರವಾಗಿ ನಗರಸಭೆ ಕಾರ್ಯವೈಖರಿ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿ, ಅವರು ದಾಳಿ ನಡೆಸಿದ್ದಾರೆ. ಈಗಲಾದರೂ ನಗರಸಭೆಯ ಅಧಿಕಾರಿ ವರ್ಗ ಎಚ್ಚೆತ್ತುಕೊಂಡು ಅಭಿವೃದ್ಧಿಯತ್ತಾ ಕೊಂಡೊಯ್ಯಬೇಕಿದೆ.

ವೀರಭದ್ರಸ್ವಾಮಿ, ಹೋರಾಟಗಾರ, ಚಾಮರಾಜನಗರ

*ಅಧಿಕಾರಿಗಳ ನಿರ್ಲಕ್ಷ್ಯ

ನಗರದ 10 ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಮಿತಿಮೀರಿದ್ದು, 15 ದಿನಗಳಿಂದ ನೀರು ಬರದೇ ಸಮಸ್ಯೆ ತಲೆದೂರಿದೆ. ನಗರಸಭೆ ಅಧಿಕಾರಿಗಳನ್ನು ಕೇಳಿದರೇ ನರಸೀಪುರ ಹಾಗೂ ಮಂಗಲದ ಬಳಿ ಮೋಟರ್ ಕೆಟ್ಟು ಹೋಗಿದೆ ಎಂದು ಯಾವಾಗಲೂ ಸಬೂಬು ಹೇಳುತ್ತಾರೆ. ನಮ್ಮ ವಾರ್ಡ್‌ನಲ್ಲಿರುವ ನಿವಾಸಿಗಳು ಕಂದಾಯವನ್ನು ಸಮರ್ಪಕವಾಗಿ ಕಟ್ಟುತ್ತಿದ್ದಾರೆ. ಆದರೇ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಲವಾಗಿದೆ. ನಾನು ಒಂದು ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ವರ್ಷವೇ ಆಗಿದ್ದು, ಇಂದಿಗೂ ಖಾತೆ ಮಾಡಿಕೊಟ್ಟಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಶುಭೋದಯ ಸಿದ್ದರಾಜು, 10ನೇ ವಾರ್ಡ್, ಚಾಮರಾಜನಗರ

*ನೀರಿನ ಸಮಸ್ಯೆ ವಿಪರೀತ

ಜಿಲ್ಲಾ ಕೇಂದ್ರವಾಗಿ ಇಷ್ಟು ವರ್ಷಗಳೇ ಆಗಿದ್ದರೂ, ನೀರಿನ ಸಮಸ್ಯೆಗೆ ಇಂದಿಗೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ವಾರ್ಡ್‌ನಲ್ಲಿ ಯಾವಾಗಲೂ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿರುತ್ತದೆ. ಕೆಎಚ್‌ಬಿ ಕಾಲೋನಿಯಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ವಾರ್ಡ್ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ನಗರಸಭೆ ಸಂಪೂರ್ಣ ವಿಲವಾಗಿದ್ದು, ಅಧಿಕಾರಿಗಳು ಬಹಳ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಾರೆ.

ಡಿ.ನಾಗರಾಜ್, 26ನೇ ವಾರ್ಡ್ ನಿವಾಸಿ, ಚಾಮರಾಜನಗರ

*ರಸ್ತೆ ಬಂದಿಯಲ್ಲಿ ಕಸದ ರಾಶಿ

ನಗರಸಭೆ ವ್ಯಾಪ್ತಿಯಲ್ಲಿ ಬರುವ 1ನೇ ವಾರ್ಡ್‌ನಲ್ಲಿ ಕಸದ ಸಮಸ್ಯೆಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸಾರಾಗವಾಗಿ ಹೋಗದೇ ಸಮಸ್ಯೆಯಾಗುತ್ತಿದೆ. ಕೆಲವು ರಸ್ತೆ ಬದಿಗಳಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡದೇ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು.

ನಾಗಮ್ಮ, 1ನೇ ವಾರ್ಡ್ ನಿವಾಸಿ, ಚಾಮರಾಜನಗರ

*ನೀರಿನ ಸಮಸ್ಯೆ ತಪ್ಪಿಲ್ಲ

ಬುದ್ಧನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಿ ಹತ್ತು ದಿನಗಳೇ ಆಗಿದ್ದು, ನಮ್ಮ ವಾರ್ಡ್‌ನಲ್ಲಿ ಈ ಬವಣೆ ತಪ್ಪಿಲ್ಲ. ಸಾರ್ವಜನಿಕರು ಹೆಚ್ಚಿನ ಹಣವನ್ನು ನೀಡಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ನಗರಸಭೆಯ ಯಾರನ್ನು ಕೇಳಿದರೂ ಮೋಟರ್ ರಿಪೇರಿ ಎಂದು ಹೇಳುತ್ತಾರೆ. ಇದು ನಿರಂತರವಾದ ಸಮಸ್ಯೆಯಾಗಿದೆ. ಬುದ್ಧನಗರ ನಗರಸಭೆಗೆ ಹೆಚ್ಚಿನ ತೆರಿಗೆ ಪಾವತಿ ಮಾಡುವ ಪ್ರತಿಷ್ಠಿತ ಬಡಾವಣೆಯಾಗಿದೆ. ಆದರೇ ಇಂತಹ ಬಡಾವಣೆಯಲ್ಲೇ ಮೂಲಸೌಕರ್ಯ ಸಮಸ್ಯೆ ಎದ್ದು ಕಾಣುತ್ತಿದೆ.

ಶಂಕರಪ್ಪ, ಬುದ್ಧನಗರ ನಿವಾಸಿ, ಚಾಮರಾಜನಗರ

*ನಗರಸಭೆಯಲ್ಲ ನರಕಸಭೆ

ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಯಾವುದು ಆಗುವುದಿಲ್ಲ. ಆಗಾಗಿಯೇ ಇದನ್ನು ನರಕಸಭೆ ಎಂದು ಕರೆಯಲಾಗುತ್ತದೆ. ಸಾರ್ವಜನಿಕರೊಬ್ಬರು ಯಾವುದೇ ಕೆಲಸ ಮಾಡಿಸಲು ಕಡತಗಳನ್ನು ನೀಡಿದರೇ ವರ್ಷವಾದರೂ ಅದು ಬಿದ್ದಲ್ಲಿಯೇ ಬಿದ್ದಿರುತ್ತದೆ. ಆದರೇ ಹಣ ಕೊಟ್ಟವರ ಕೆಲಸಗಳು ಮಾತ್ರ ಬೇಗ ಆಗುತ್ತದೆ. ಅಭಿವೃದ್ಧಿ ಪರವಾದ ಚಿಂತನೆ ಉಳ್ಳವರು ಅಧಿಕಾರಿಗಳ ಸ್ಥಾನಕ್ಕೆ ಬಂದರೇ ಎಲ್ಲವೂ ಸರಿಯಾಗುತ್ತದೆ. ಆದರೇ ಸ್ಥಳೀಯ ಶಾಸಕರು ದುಡ್ಡುಕೊಟ್ಟವರಿಗೆ ಮಣೆ ಹಾಕುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ.

ಆನಂದ್ ಭಗೀರಥ, ಯುವ ಮುಖಂಡ, ಚಾಮರಾಜನಗರ