ಜಿಲ್ಲೆ

ವಾರ್ಡ್ ಸಮಿತಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ 27ರಿಂದ

ಹುಬ್ಬಳ್ಳಿ: ಅವಳಿ ನಗರದ ನಾಗರಿಕರಿಗೆ ಅನುಕೂಲವಾಗುವ ವಾರ್ಡ್ ಸಮಿತಿ ರಚನೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ಮಾ. 27ರಿಂದ ಧಾರವಾಡದಲ್ಲಿನ ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ವಾರ್ಡ್ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ಟರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಧಾರವಾಡದಲ್ಲಿ ಪಾಲಿಕೆಯ ಸಾಮಾನ್ಯ ಸಭೆ ಜರುಗಲಿದ್ದು, ಅಲ್ಲಿಯ ಉಪವಾಸ ಸತ್ಯಾಗ್ರಹ ಆರಂಭಿಸಿ ಮುಂದುವರಿಸಲಾಗುವುದು ಎಂದರು.

ಬಿಬಿಎಂಪಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ವಾರ್ಡ್ ಸಮಿತಿ ರಚಿಸಿವೆ. ಆದರೆ, ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರು ಮಾಡುತ್ತೇವೆ ಎಂದು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.

ವಾರ್ಡ್ ಸಮಿತಿ ರಚನೆಯ ಕುರಿತು ಹೊಸದಾಗಿ ಮಾನದಂಡ ರೂಪಿಸಲು ರಚಿಸಲಾದ ಪಾಲಿಕೆಯ ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ಸದನ ಸಮಿತಿಯು ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ ತಿಂಗಳು ಕಳೆದಿದೆ. ಇಲ್ಲಿಯವರೆಗೂ ವರದಿ ನೀಡಿಲ್ಲ. ವರದಿ ನೀಡಲು ಪಾಲಿಕೆ ಮೇಯರ್ ಕಾಲಮಿತಿ ನಿಗದಿಪಡಿಸಿಲ್ಲ. ಸದನ ಸಮಿತಿಯು ನೀಡಿದ ವರದಿಯನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು. ಬಳಿಕ ಜಾರಿಯಲ್ಲಿ ಬರಬೇಕಿದೆ ಎಂದರು.