ಬಾಗಲಕೋಟ: ಬಾಗಲಕೋಟ ನಗರ ವನಗಳಿಂದ ತುಂಬಿದ ಸುಂದರವಾದ ನಗರ ನಾಗರಿಕರೆಲ್ಲರನ್ನು ಸದೃಢರನ್ನಾಗಿಸಲು ವಾರ್ಡಿಗೊಂದು ಯೋಗ ಕಕ್ಷೆ ಆರಂಭಿಸುವುದೇ ನಮ್ಮ ಪ್ರಮುಖವಾದ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿಯ ಮುಖ್ಯ ಪ್ರಭಾರಿ ಶ್ರೀ ಭವರಲಾಲ್ ಆರ್ಯಾಜಿ ಹೇಳಿದರು.
ನಗರದ ವಿದ್ಯಾಗರಿಯ ಸಾಯಿ ಮಂದಿರ ಆವರಣದಲ್ಲಿ 21 ದಿನಗಳಿಂದ ಹಮ್ಮಿಕೊಂಡಿದ್ದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ 108 ಯೋಗ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗಳಿಕೆಯನ್ನೇ ಗುರಿಯಾಗಿರಿಸಿಕೊಂಡಿರುವ, ಆಧುನಿಕ ಯುಗದ ಪ್ರತಿಯೊಬ್ಬ ವ್ಯಕ್ತಿ ಒಂದಿಲ್ಲಾ ಒಂದು ರೋಗದಿಂದ ಬಳಲುತ್ತಿರುವುದು ವಾಸ್ತವಿಕ ಸಂಗತಿಯಾಗಿದೆ. ರೋಗದಿಂದ ಮುಕ್ತಿ ಹೊಂದಲು ಯೋಗ ಮಾರ್ಗ ಒಂದೆ ಸರಳ ಸೂತ್ರವಾಗಿದೆ. ರಾಜ್ಯದ ಅನೇಕ ಅನುಭವಿ ಯೋಗ ಶಿಕ್ಷಕರಿಂದ ತರಬೇತಿ ಪಡೆದಿರುವ ತಾವೆಲ್ಲರೂ ರೋಗ ಮುಕ್ತ ಸಮಾಜ ನಿರ್ಮಿಸಲು ಕಂಕಣಬದ್ಧರಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಜಿ ಎನ್ ಪಾಟೀಲ್ ಮಾತನಾಡುತ್ತಾ, ನಮ್ಮ ಏಳಿಗೆ ನಮ್ಮ ಕೈಯಲ್ಲಿದೆ .ಅದಕ್ಕೆ ಮಾರ್ಗದರ್ಶನ ಮುಖ್ಯವಾಗಿದೆ .ಪತಂಜಲಿ ತಂಡದ ಸಹವಾಸವನ್ನು ನಾವು ಬೆಳೆಸಿಕೊಂಡರೆ, ಯೋಗ ಮಾರ್ಗದ ಮೂಲಕ ಬಾಳನ್ನ ಹಸನಾಗಿಸಲು ಸಾಧ್ಯ. ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಪತಂಜಲಿ ಯೋಗ ಸಮಿತಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ, ಅದಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಪ್ರಭಾರಿ ಎಚ್ ಎನ್ ಇನಾಮ್ದಾರ್, ರಾಜು ದಂಡಗಿ, ಬಿ.ಎಸ್.ಕಟಗೇರಿ, ಸೀಮಾ ಮಣ್ಣೂರ, ಕೆ ಮಾಲತಿ ಸುಜಾತ ದೊಡ್ಮನಿ ಚನ್ನಮ್ಮ ಮೇಟಿ ಮುಂತಾದವರು ಭಾಗವಹಿಸಿದ್ದರು ಶ್ರೀಶೈಲ್ ಮಠಪತಿ ನಿರೂಪಿಸಿದರು.