ಜಿಲ್ಲೆ

ವಾರಾಂತ್ಯ ಕರ್ಫ್ಯೂಗೆ ಉತ್ತಮ ಸ್ಪಂದನೆ

Dharwad

ಹುಬ್ಬಳ್ಳಿ: ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಎಂಬ ಸರ್ಕಾರದ ಸೂಚನೆಯನ್ನು ಸೋಮವಾರದಿಂದ ಶುಕ್ರವಾರದವರೆಗಿನ ಲಾಕ್​ಡೌನ್ ಸಡಿಲಿಕೆ ಅವಧಿಯಲ್ಲಿ ಗಂಭೀರವಾಗಿ ಪರಿಗಣಿಸದ ನಗರದ ಜನರು, ವಾರಾಂತ್ಯದ ಕರ್ಫ್ಯೂ ವಿಷಯದಲ್ಲಿ ಗಂಭೀರತೆ ಪ್ರದರ್ಶಿಸಿದರು. ಶನಿವಾರದಂತೆ ಭಾನುವಾರವೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಡಿಮೆ ಇದ್ದುದೇ ಇದಕ್ಕೆ ಸಾಕ್ಷಿ.

ಮಧ್ಯಾಹ್ನ 2 ಗಂಟೆವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಮತ್ತು ಕಿರಾಣಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಮಾತ್ರ ವಾರಾಂತ್ಯದ ದಿನಗಳಂದು ಅನುಮತಿ ಇದೆ. ಜನಾಕರ್ಷಣೆಯ ಬಟ್ಟೆ, ಕಾಸ್ಮೆಟಿಕ್ಸ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇತ್ಯಾದಿ ಅಂಗಡಿಗಳು ತೆರೆದಿರುವುದಿಲ್ಲ ಎಂದು ಮೊದಲೇ ಗೊತ್ತಿದ್ದುದರಿಂದ ಹಲವರು ಮಾರುಕಟ್ಟೆಗಳತ್ತ ಸುಳಿಯಲಿಲ್ಲ. ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ ಇತ್ತು. ತುರ್ತು ಅವಶ್ಯವಿರುವ ವಸ್ತುಗಳ ಖರೀದಿಗೆ ಬಂದವರೂ ಮಾಸ್ಕ್ ಧಾರಣೆ, ಅಂತರ ನಿರ್ವಹಣೆಗೆ ಮಹತ್ವ ನೀಡಿದ್ದರು. ಮಧ್ಯಾಹ್ನ 1.30ರ ಸುಮಾರಿಗೆಲ್ಲ ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಸುತ್ತು ಹಾಕುತ್ತ ಮೈಕ್​ನಲ್ಲಿ ಲಾಕ್​ಡೌನ್ ಸಡಿಲಿಕೆ ಅವಧಿ ಮುಗಿಯುತ್ತ ಬಂದಿದೆ ಎಂದು ಸಾರಿದರು. ಜನರು ಬೇಗ ಬೇಗ ಮನೆ ಸೇರಿಕೊಂಡರು.

ವ್ಯಾಕ್ಸಿನ್​ಗೆ ಬಹು ಬೇಡಿಕೆ

ಹುಬ್ಬಳ್ಳಿ: ಕರೊನಾ ಲಸಿಕೆ ಹಾಕಿಸಿಕೊಳ್ಳಲು ಜನ ಬಹಳಷ್ಟು ಆಸಕ್ತಿ ತೋರಿಸುತ್ತಿರುವುದು ಭಾನುವಾರ ಸಹ ಕಂಡುಬಂದಿತು. ನಗರ-ಗ್ರಾಮಾಂತರದ ಲಸಿಕಾ ಕೇಂದ್ರಗಳ ಎದುರು ಬೆಳಗ್ಗೆಯೇ ನೂರಾರು ಜನ ಟೋಕನ್​ಗಾಗಿ ಸಾಲುಗಟ್ಟಿ ನಿಂತಿದ್ದರು. ಕೆಲವು ಕಡೆಗಳಲ್ಲಿ ನೂಕುನುಗ್ಗಲು ಸಹ ಉಂಟಾಗಿ, ಕರೊನಾ ಮಾರ್ಗಸೂಚಿಗಳ ಪಾಲನೆ ಸರಿಯಾಗಿ ಆಗಲಿಲ್ಲ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ನಿಗದಿತ ಪ್ರಮಾಣದಲ್ಲಿ ಪೂರೈಕೆಯಾಗಿದ್ದವು. ಯಾವುದೇ ಕೇಂದ್ರದಲ್ಲೂ ಗೊಂದಲವಾಗದಂತೆ ಲಸಿಕಾರಣವನ್ನು ನಿರ್ವಹಿಸಲಾಯಿತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

46 ಪ್ರಕರಣ ಪತ್ತೆ

ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 46 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನ ಮೃತಪಟ್ಟಿದ್ದಾರೆ. 58 ಜನ ಬಿಡುಗಡೆಯಾಗಿದ್ದು, 658 ಸಕ್ರಿಯ ಪ್ರಕರಣಗಳಿವೆ. ಈವರೆಗೆ 1190 ಜನ ಮೃತಪಟ್ಟಿದ್ದಾರೆ.

ಚುಚ್ಚುಮದ್ದು ವಿಷಯದಲ್ಲಿ ರಾಜಕಾರಣ ಸಲ್ಲ

ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರು ಲಸಿಕೆ ಸಿಗುತ್ತಿಲ್ಲವೆಂದು ಬೊಬ್ಬೆ ಹೊಡೆದು, ರಾಜಕೀಯ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಕುಟುಕಿದ್ದಾರೆ.

ಈ ಮೊದಲು ಲಸಿಕೆ ತೆಗೆದುಕೊಳ್ಳುವುದು ಬೇಡ, ಬೇಕಾದರೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು ತೆಗೆದುಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ಲಸಿಕೆ ಬಗೆಗೆ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದರು. ಜನರು ವಿಶ್ವಾಸವಿಟ್ಟು ಲಸಿಕೆ ಪಡೆಯುತ್ತಿದ್ದಾರೆ. ಈಗ ಶಾಸಕರು ಲಸಿಕೆ ಸಿಗುತ್ತಿಲ್ಲ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅವಳಿ ನಗರಕ್ಕೆ 5 ಲಕ್ಷ ಲಸಿಕೆಗಳನ್ನು ಪೂರೈಸುವಂತೆ ಮಾಡಿದ್ದಾರೆ. ಜಿಲ್ಲಾಡಳಿತ ಸಮರ್ಥವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ವಿರುದ್ಧದ ಹೇಳಿಕೆ ನೀಡುವುದನ್ನು ಅಬ್ಬಯ್ಯ ಅವರು ಬಿಡಬೇಕು ಎಂದು ಆಗ್ರಹಿಸಿದ್ದಾರೆ.