ರಾಮನಗರ: ಕರೊನಾ ಮೂರನೇ ಅಲೆ ನಿಯಂತ್ರಣಕ್ಕಾಗಿ ಹೇರಿರುವ ವಾರಾಂತ್ಯದ ಕರ್ಫ್ಯೂಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಆಚರಣೆ ಸರಾಗವಾಗಿ ಸಾಗಿತು.
ಶನಿವಾರ ಸಂಕ್ರಾಂತಿ ಹಬ್ಬವಿದ್ದ ಕಾರಣ ವೀಕೆಂಡ್ ಕರ್ಫ್ಯೂಗೆ ಹೆಚ್ಚು ಮನ್ನಣೆ ದೊರೆಯಲಿಲ್ಲ. ಆದರೆ, ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದು ಹೊರತು ಪಡಿಸಿದರೇ, ಬೇರೆಲ್ಲವೂ ಸಹಜವಾಗಿತ್ತು. ಅಗತ್ಯ ಪದಾರ್ಥಗಳ ಖರೀದಿ ನೆಪ ಹೇಳಿ ಜನತೆ ರಸ್ತೆಗೆ ಇಳಿದಿದ್ದ ದಶ್ಯ ಸಾಮಾನ್ಯವಾಗಿತ್ತು. ಇದರ ನಡುವೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರ ಕೊರತೆ ಇದ್ದ ಕಾರಣ ಬಿಕೋ ಎನ್ನುತ್ತಿತ್ತು.
ಇನ್ನು ವೀಕೆಂಡ್ ಕರ್ಫ್ಯೂ ಇದ್ದ ಕಾರಣ, ಜನತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಶುಕ್ರವಾರ ಸಂಜೆಯೇ ರಸ್ತೆಗೆ ಇಳಿದ ಕಾರಣ ಸಂಚಾರ ದಟ್ಟಣೆ ಏರ್ಪಟಿತ್ತು. ಶನಿವಾರವೂ ದಿನಸಿ ಅಂಗಡಿ, ಪೆಟ್ರೋಲ್ ಬಂಕ್, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಣ್ಣು , ತರಕಾರಿ ಸೇರಿ ಇತರ ಅಂಗಡಿಗಳು ತೆರೆದಿದ್ದ ಕಾರಣ, ಜಿಲ್ಲೆಯ ಜನತೆ ನಿರಾಂತಕವಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ಸಂಕ್ರಾಂತಿ ಹಬ್ಬ: ಇನ್ನು ಜಿಲ್ಲಾ ಕೇಂದ್ರ ರಾಮನಗರ ಸೇರಿ ಗ್ರಾಮಾಂತರ ಪ್ರದೇಶದಲ್ಲಿಯೂ ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸಲಾಯಿತು. ಕರ್ಫ್ಯೂ ಇದ್ದ ಕಾರಣ ದೊಡ್ಡ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದರು. ಸ್ಥಳದಲ್ಲಿಯೇ ಮೂರು ನಾಲ್ಕು ಹೋರಿ ಹಾಗು ಹಸುಗಳನ್ನು ಕಿಚ್ಚು ಹಾಯಿಸಿದ್ದು ಕಂಡುಬಂತು.
ರೇಷ್ಮೆ ಮಾರುಕಟ್ಟೆ: ರೇಷ್ಮೆ ಮಾರುಕಟ್ಟೆಯು ಎಂದಿನಂತೆ ಕಾರ್ಯ ನಿರ್ವಹಿಸಿದೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ವರ್ತಕರು ಗೂಡು ಹರಾಜು ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಅಧಿಕಾರಿಗಳು ಸಹ ಎಂದಿನಂತೆ ಕಾರ್ಯ ನಿರ್ವಹಿಸಿದರು.
ಹೆದ್ದಾರಿ ಖಾಲಿ: ವೀಕೆಂಡ್ ಕರ್ಯ್ೂ ಕುರಿತು ಮಾಹಿತಿ ಇದ್ದ ಕಾರಣ ಬೆಂಗಳೂರು ಸೇರಿ ಬೇರೆ ಕಡೆ ಉದ್ಯೋಗಕ್ಕೆಂದು ತೆರಳಿದ್ದ ಮಂದಿ ಶುಕ್ರವಾರ ರಾತ್ರಿಯೇ ಗೂಡು ಸೇರಿಕೊಂಡಿದ್ದರು. ಹಾಗಾಗಿ ಶನಿವಾರ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸರಕು ಸಾಗಣೆ ಸೇರಿ ಇತರ ಪದಾರ್ಥಗಳ ಸಾಗಣೆಗೆ ಅವಕಾಶ ಇದ್ದ ಕಾರಣ, ಹೆದ್ದಾರಿಯಲ್ಲಿ ಬಹತ್ ವಾಹನಗಳು ಕಂಡುಬಂದವು. ಸಂಜೆಯ 5ರ ನಂತರ ಇವುಗಳ ಸಂಚಾರವೂ ವಿರಳವಾಗಿತ್ತು.