ಜಿಲ್ಲೆ

ವಾರಸುದಾರರಿಗೆ ಚಿನ್ನಾಭರಣ ವಾಪಸ್

ಮೈಸೂರು: ಜಿಲ್ಲಾ ಪೊಲೀಸರು ಪತ್ತೆ ಮಾಡಿದ 63 ಪ್ರಕರಣಗಳಿಗೆ ಸಂಬಂಧಿಸಿದ 1.34 ಕೋಟಿ ರೂ. ಮೊತ್ತದ ವಸ್ತುಗಳನ್ನು ವಾರಸುದಾರರಿಗೆ ವಾಪಸ್ ಮಾಡಲಾಯಿತು. ಕೈತಪ್ಪಿದ ಮಾಲುಗಳು ಮರಳಿ ಸಿಗುತ್ತಿದ್ದಂತೆ ಅವುಗಳ ಮಾಲೀಕರು ಸಂಭ್ರಮಿಸಿದರು.


ಜ್ಯೋತಿನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಶುಕ್ರವಾರ ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಅವರು ಪತ್ತೆಯಾದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಪ್ರಕರಣಗಳನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿ, ಉತ್ತೇಜಿಸಿದರು.


ಜಿಲ್ಲಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 2023 ಜನವರಿಯಿಂದ ಜುಲೈವರೆಗೆ ಕೊಲೆ ಪ್ರಕರಣ 1, ದರೋಡೆ ಪ್ರಕರಣ 2, ಸುಲಿಗೆ ಪ್ರಕರಣ 4, ಸರಗಳ್ಳತನ 2, ಕಳ್ಳತನ ಪ್ರಕರಣಗಳು 38, ವಾಹನ ಕಳ್ಳತನ-15, ವಂಚನೆ ಪ್ರಕರಣ 1 ಸೇರಿದಂತೆ ಒಟ್ಟು 63 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ವಸ್ತು, ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.


81.02 ಲಕ್ಷ ರೂ. ಮೌಲ್ಯದ 1.770 ಕೆಜಿ ಚಿನ್ನಾಭರಣ, 920 ಗ್ರಾಂ ಬೆಳ್ಳಿ, 12.62 ಲಕ್ಷ ರೂ. ನಗದು, 36.23 ಲಕ್ಷ ರೂ. ಮೌಲ್ಯದ 22 ವಾಹನ, 80,800 ರೂ. ಮೌಲ್ಯದ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕ್ ಉಪಕರಣ, 3.06 ಲಕ್ಷ ರೂ. ಮೌಲ್ಯದ 7 ಹಸು, 13 ಕುರಿ, 43 ಪಾರಿವಾಳ, 1 ಲಕ್ಷ ರೂ. ಮೌಲ್ಯದ ದೇವರ ವಿಗ್ರಹಗಳು, 6.92 ಲಕ್ಷ ರೂ. ಮೌಲ್ಯದ ರೈತ ಉಪಯೋಗಿ ವಸ್ತುಗಳು ಹಾಗೂ ಸಿಇಐಆರ್ ಪೋರ್ಟಲ್ ಮುಖಾಂತರ ವಿವಿಧ ಕಂಪನಿಯ 25 ಲಕ್ಷ ರೂ. ಮೌಲ್ಯದ 192 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ತಿ.ನರಸೀಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ 800 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಶಾಮೀಲಾಗಿದ್ದರು. ಇನ್ನೂ ಮೂವರು ಪತ್ತೆಯಾಗಬೇಕಿದ್ದು, 2 ಕೆ.ಜಿ.ಯಷ್ಟು ಚಿನ್ನಾಭರಣ ವಶಪಡಿಸಿಕೊಳ್ಳುವುದು ಬಾಕಿ ಇದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿ 15 ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ. ಜೈಲಿಗೆ ಹೋಗಿ ಬಂದ ನಂತರವೂ ಕೃತ್ಯ ಮುಂದುವರಿಸಿದ್ದ. ಆತನ ಪತ್ತೆಗೆ ಶೋಧ ಮುಂದುವರಿಸಲಾಗಿದೆ ಎಂದು ತಿಳಿಸಿದರು.


ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ, ಡಿವೈಎಸ್ಪಿಗಳಾದ ಗೋವಿಂದರಾಜು, ಡಾ. ಸುಮಿತ್ ಮತ್ತಿತರರಿದ್ದರು.