ಜಿಲ್ಲೆ

ವಾರಬಂದಿ ಪದ್ಧತಿ ಹಾಸ್ಯಾಸ್ಪದ

ಹುಣಸಗಿ: ಆಲಮಟ್ಟಿ ಜಲಾಶಯದಲ್ಲಿ ೩೦ ಟಿಎಂಸಿ ನೀರಿದ್ದರೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ವಾರಬಂದಿ ಮೂಲಕ ನೀರು ಹರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಶಾಸಕ ನರಸಿಂಹ ನಾಯಕ (ರಾಜುಗೌಡ) ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬಿನ ಬೆಳೆಗೆ ಅನುಕೂಲ ಕಲ್ಪಿಸಲು ನೀರು ಸಂಗ್ರಹಿಸಿಟ್ಟು ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆ ರೈತರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕುಡಿಯುವ ನೀರು ಮತ್ತು ನೀರಾವರಿಗೆ ಮೊದಲ ಆದ್ಯತೆ ನೀಡುವ ದೃಷ್ಟಿಯಿಂದ ಜಲಾಶಯ ನಿರ್ಮಿಸಲಾಗಿದೆ. ಆದರೆ ಕೈಗಾರಿಕೆಗಾಗಿ ನೀರು ಸಂಗ್ರಹಿಸಿ ಕಾಲುವೆಗೆ ವಾರಬಂದಿ ಮೂಲಕ ಹರಿಸುತ್ತಿರುವುದು ಸರಿಯಲ್ಲ. ನಮ್ಮ ಭಾಗದ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳದೆ ಹಾಗೂ ಸಲಹಾ ಸಮಿತಿ ಅಧ್ಯಕ್ಷರನ್ನು ಪ್ರಶ್ನಿಸದೆ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ದೂರಿದರು.

ಸುರಪುರ ಮತಕ್ಷೇತ್ರದ ಬಿಜೆಪಿ ಮುಖಂಡ ಯಲ್ಲಪ್ಪ ಕುರುಕುಂದಿ ಹಾಗೂ ಕಕ್ಕೇರಾ ಪುರಸಭೆ ಸದಸ್ಯ ಮಲ್ಲು ದಂಡಿನ್ ಸೇರಿ ಹಲವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರ ಹಿಂದೆ ಕಾಂಗ್ರೆಸ್ ಮುಖಂಡರೊಬ್ಬರ ಕೈವಾಡವಿದೆ. ವಾರದೊಳಗೆ ಪ್ರಕರಣ ಕೈ ಬಿಡದಿದ್ದರೆ ಬಿಜೆಪಿ ಕರ‍್ಯಕರ್ತರೊಂದಿಗೆ ಹುಣಸಗಿಯಲ್ಲಿ ಸೆ.೧೮ರಂದು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮುಖಂಡರಾದ ಬಿ.ಎಂ. ಹಳ್ಳಿಕೋಟಿ, ಬಸವರಾಜ ಸ್ವಾಮಿ ಸ್ಥಾವರಮಠ, ವೀರೇಶ ಚಿಂಚೋಳಿ, ಮೇಲಪ್ಪ ಗುಳಗಿ, ಎಚ್.ಸಿ.ಪಾಟೀಲ್, ಸುರೇಶ ಸಜ್ಜನ್ ಇತರರಿದ್ದರು.