ಬೇಲೂರು: ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣವನ್ನು ವಾರದೊಳಗೆ ಪಾವತಿಸಬೇಕು. ಇಲ್ಲದಿದ್ದಲ್ಲಿ ಬಾಡಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಎಚ್ಚರಿಕೆ ನೀಡಿದರು.
ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಗೆ ಸೋಮವಾರ ಸಂಜೆ ಖುದ್ದು ಭೇಟಿ ನೀಡಿದ ಅವರು, ಮಳಿಗೆ ಬಾಡಿಗೆ ಬಾಕಿ ನೀಡುವಂತೆ ಮಾಲೀಕರಿಗೆ ಹೇಳಿದರು. ಪುರಸಭೆಗೆ ಸೇರಿದ 193 ವಾಣಿಜ್ಯ ಮಳಿಗೆಗಳಿಂದ ಸುಮಾರು 1 ಕೋಟಿ ರೂ.ಬಾಡಿಗೆ ಹಣ ಬಾಕಿ ಬರಬೇಕಿದೆ. ಕರ ವಸೂಲಿಗಾರರು ಮತ್ತು ಅಧಿಕಾರಿಗಳು ಕೇಳಲು ಹೋದರೆ ಅವರಿಗೆ, ಬಾಡಿಗೆದಾರರು ಸ್ಪಂದಿಸದೆ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಿದ್ದರು. ಆದ್ದರಿಂದ ಇಂದು ಖುದ್ದು ನಾನೇ ಬಾಡಿಗೆ ವಸೂಲಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಬಂದಿದ್ದೇನೆ. ವಾರದೊಳಗೆ ಸಂಪೂರ್ಣ ಕಟ್ಟಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ 2023ರ ಡಿಸೆಂಬರ್‌ಗೆ 193 ವಾಣಿಜ್ಯ ಮಳಿಗೆಗಳ ಬಾಡಿಗೆ ಕರಾರು ಅವಧಿ ಮುಗಿಯಲಿದ್ದು, ನಂತರದಲ್ಲಿ ಮಳಿಗೆಗಳನ್ನು ಮರು ಹರಾಜು ಮಾಡಲಾಗುವುದು ಎಂದರು. ನಂತರ ಸ್ಥಳದಲ್ಲೇ 5 ಲಕ್ಷ ರೂ. ಬಾಡಿಗೆ ವಸೂಲಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಬಾಡಿಗೆ ಬಾಕಿ ಇರುವವರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಒಂದು ವಾರದಲ್ಲಿ ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಬಾಡಿಗೆಯನ್ನು ಕಟ್ಟದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಸದಸ್ಯ ಜಗದೀಶ್, ಕಂದಾಯಾಧಿಕಾರಿ ಹರೀಶ್, ಕಂದಾಯ ನಿರೀಕ್ಷಕ ಪ್ರಸನ್ನ, ಆರೋಗ್ಯಾಧಿಕಾರಿ ಲೋಹಿತ್, ಜ್ಯೋತಿ, ದಿನೇಶ್, ಸಿಬ್ಬಂದಿ ಆನಂದ್, ಪೃಥ್ವಿ, ಸಲ್ಮಾನ್ ಇತರರಿದ್ದರು.