ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ವಾರದ ಎಲ್ಲ ಸಂತೆಗಳನ್ನೂ ರದ್ದು ಪಡಿಸಿದ್ದು, ತರಕಾರಿ ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ. ಈಗಷ್ಟೇ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದ ಬಡ ಹಾಗೂ ಮಧ್ಯಮ ವರ್ಗದ ರೈತರಿಗೆ ಕರೊನಾ 2ನೇ ಅಲೆ ‘ಗಾಯದ ಮೇಲೆ ಬರೆ’ ಎಳೆದಿದೆ.
ಶನಿವಾರ ಮತ್ತು ಭಾನುವಾರ ‘ವೀಕೆಂಡ್ ಲಾಕ್‌ಡೌನ್’ ಜಾರಿಯಲ್ಲಿರುವುದರಿಂದ ಹಾಗೂ ಕೋವಿಡ್ ಹಿಮ್ಮೆಟ್ಟಿಸಲು ಜಿಲ್ಲಾಡಳಿತ ಮೇ 4ರ ವರೆಗೂ ವಿವಿಧೆಡೆ ದಿನವೂ ಇರುವ ವಾರದ ಎಲ್ಲ ಸಂತೆಗಳನ್ನೂ ಬಂದ್ ಮಾಡಿಸಿದೆ. ಹೀಗಾಗಿ ವಾರದ ಏಳು ದಿನವೂ ವಿವಿಧೆಡೆ ನಡೆಯುವ ವಾರದ ಸಂತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ರೈತರ ಬಳಿ ತರಕಾರಿ ಖರೀದಿಸುತ್ತಿಲ್ಲ. ಇತ್ತ ವಿವಿಧ ಬಗೆಯ ಬಲಿತ ತರಕಾರಿಗಳನ್ನು ರೈತರು ಕಟಾವು
ಮಾಡಿದ್ದು, ಅದನ್ನು ಖರೀದಿಸುವವರೇ ಇಲ್ಲವಾಗಿದ್ದಾರೆ.
ನಿಂತಿತು ಬದುಕಿನ ಬಂಡಿ: ರಾಜ್ಯದಲ್ಲೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ 36 ಹೋಬಳಿಗಳಿವೆ. ಈ ಹೋಬಳಿ ವ್ಯಾಪ್ತಿಯ ನೂರಾರು ಗ್ರಾಮಗಳಲ್ಲಿ ಪ್ರತಿದಿನವೂ ವಾರದ ಸಂತೆ ಜರುಗುತ್ತವೆ. ಜಿಲ್ಲೆಯ ಸವದತ್ತಿ, ಮೂಡಲಗಿ, ಗೋಕಾಕ, ಚಿಕ್ಕೋಡಿ, ರಾಯಬಾಗ, ಖಾನಾಪುರ, ಬೆಳಗಾವಿ ತಾಲೂಕು ವ್ಯಾಪ್ತಿಯ 145ಕ್ಕೂ ಅಧಿಕ ಹಳ್ಳಿಗಳಲ್ಲಿ ಪ್ರತಿ ಶನಿವಾರವೂ ತರಕಾರಿ ಹಾಗೂ ಜಾನುವಾರುಗಳ ವಾರದ ಸಂತೆ ಜರಗುತ್ತದೆ. ತರಕಾರಿ ಬೆಳೆಯುವ ಸಣ್ಣ ಮತ್ತು ಮಧ್ಯಮ ರೈತರು, ಕುರಿ, ಕೋಳಿ ಸಾಕಣೆ ಮಾಡುವ ಜನರಿಗೆ ಈ ವಾರದ ಸಂತೆಗಳೇ ಜೀವನಕ್ಕೆ ಆಧಾರ. ಇಲ್ಲಿ ಗಳಿಸುವ ಆದಾಯವೇ ಬದುಕಿನ ಬಂಡಿ ಸಾಗುವ ಮೂಲವಾಗಿದೆ. ಇದೀಗ ಬದುಕಿನ ಬಂಡಿ ನಿಂತಿದೆ.
ಹಾಳಾಗುತ್ತಿದೆ ಕಾಯಿ-ಪಲ್ಲೆ: ಬೆಳಗಾವಿ ಎಪಿಎಂಸಿ ಮತ್ತು ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಬೆಳಗಾವಿ, ಬೈಲಹೊಂಗಲ, ಖಾನಾಪುರ, ಹುಕ್ಕೇರಿ, ಕಿತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಟಾವು ಮಾಡಿದ್ದ ಬದನೆಕಾಯಿ, ಹಿರೇಕಾಯಿ, ಬೆಂಡೆಕಾಯಿ, ಕೋತಂಬರಿ, ಹೀರೆಕಾಯಿ, ಮೂಲಂಗಿ, ಈರುಳ್ಳಿ ಸೇರಿದಂತೆ ಇತರೆ ಸೊಪ್ಪುಗಳನ್ನು ಜಮೀನುಗಳಲ್ಲಿಯೇ ಸಂಗ್ರಹಿಸಿಟ್ಟುಕೊಂಡಿದ್ದಾರೆ. ವಾಹನ ಸಂಚಾರವೂ ಇಲ್ಲದ್ದರಿಂದ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಗಬೇಕಾಗಿದ್ದ ನೂರಾರು ಟನ್ ತರಕಾರಿಗಳು ರೈತರ ಜಮೀನುಗಳಲ್ಲಿ ಹಾಗೂ ವ್ಯಾಪಾರಿಗಳ ಗೋದಾಮುಗಳಲ್ಲಿಯೇ ಇದೆ. ಸಕಾಲಕ್ಕೆ ಕಾಯಿ-ಪಲ್ಲೆ ಬಿಕರಿಯಾಗದ್ದರಿಂದ ಹಾಳಾಗುತ್ತಿವೆ ಎಂದು ಬೆಳೆಗಾರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ದಿನಗಳನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲ ತರಕಾರಿ ವ್ಯಾಪಾರಿಗಳು ದಿಢೀರನೇ ಬೆಲೆಯನ್ನೂ ಏರಿಸಿದ್ದಾರೆ. ಅನೇಕ ಕಡೆಗಳಲ್ಲಿ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ತಮ್ಮ ಬಳಿ ಇರುವ ತರಕಾರಿಯ ದರವನ್ನು ಏರಿಕೆ ಮಾಡಿದ್ದಾರೆ. ಇನ್ನು, ಕರ್ಯ್ೂನಿಂದಾಗಿ ಸಾರಿಗೆ ಸೌಲಭ್ಯವೂ ಇಲ್ಲದ್ದರಿಂದ ರೈತರು ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಬರುತ್ತಿಲ್ಲ. ಹಾಗಾಗಿ ತರಕಾರಿಗೆ ಭಾರಿ ಬೇಡಿಕೆ ಇದ್ದು, ಅಗತ್ಯವಿರುವಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಸಾಮಾನ್ಯ ದಿನಗಳಲ್ಲಿದ್ದ ಟೊಮ್ಯಾಟೋ 10ರೂ.ನಿಂದ 20ಕ್ಕೆ ಹಾಗೂ ಬದನೆಕಾಯಿ ಕೆಜಿಗೆ 25 ರಿಂದ 40ರೂಪಾಯಿಗೆ ಏರಿದೆ. ಹಿರೇಕಾಯಿ, ಬೆಂಡೆಕಾಯಿ ಕೆಜಿಗೆ 20 ರಿಂದ 35 ರೂ.ಗೆ, ಕೋತಂಬರಿ ಕಟ್ಟು 5ರಿಂದ 10 ರೂ.ಗೆ, ಈರುಳ್ಳಿ 20ರಿಂದ 50 ರೂ.ಗೆ ಹಾಗೂ ಜವಾರಿ ಬಾಳೆಹಣ್ಣು ಡಜನ್‌ಗೆ 40 ರಿಂದ 50 ರೂ.ಗೆ ಏರಿಕೆ ಮಾಡಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ದರ ಏರಿಕೆ ಮಾಡುವುದು ಅನಿವಾರ್ಯ ಎನ್ನುತ್ತಾರೆ ವ್ಯಾಪಾರಿ ಈರವ್ವ ಇಟ್ಟಣ್ನವರ, ಇಕ್ಬಾಲ್ ಎಸ್.ಮುಲ್ಲಾ.
ವೀಕೆಂಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಇಲ್ಲಿಂದ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತರಕಾರಿ ಸಾಗಣೆ ಆಗುತ್ತಿಲ್ಲ. ಈಗ ರೈತರಿಗೆ ಸಮಸ್ಯೆ ಉಂಟಾಗಿರುವುದು ನಿಜ. ಆದರೆ, ಕರೊನಾ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯ. ಎಲ್ಲರೂ ಸರ್ಕಾರದ ನಿಯಮ ಪಾಲಿಸಲೇಬೇಕಿದೆ.| ಡಾ. ಕೆ.ಕೋಡಿಗೌಡ. ಎಪಿಎಂಸಿ ಕಾರ್ಯದರ್ಶಿ, ಬೆಳಗಾವಿಕರೊನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ವಿರೋಧ ಇಲ್ಲ. ಆದರೆ, ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ರೈತರು ಬೆಳೆದಿರುವ ತರಕಾರಿ-ಹಣ್ಣುಗಳು ಕೊಳೆತು ಹೋಗುತ್ತವೆ. ಇದೀಗ ಶನಿವಾರ ಹಾಗೂ ಭಾನುವಾರ ಎರಡು ದಿನ ‘ವೀಕೆಂಡ್ ಲಾಕ್‌ಡೌನ್’ ಹೇರಿದ್ದರಿಂದ ಕಟಾವು ಮಾಡಿರುವ ತರಕಾರಿಗಳೆಲ್ಲ ಜಮೀನಿನಲ್ಲಿಯೇ ಉಳಿದಿವೆ. ಇದರಿಂದ ಗ್ರಾಹಕರಿಗೂ ತೊಂದರೆ. ಮುಖ್ಯವಾಗಿ ತರಕಾರಿ ಬೆಳೆಗಾರರು ಭಾರಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.| ರವಿ ಸಿದ್ದಮ್ಮನವರ. ಹಸಿರುಸೇನೆ ಜಿಲ್ಲಾಧ್ಯಕ್ಷ, ರಾಮದುರ್ಗ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ