ಚಿತ್ರದುರ್ಗ: ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗಾರಿಕೆ ಹಾಗೂ ಗಣಿಗಾರಿಕೆ ಕಂಪನಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಾವಣಗೆರೆ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ.ನಾಯಕ್ ಸಲಹೆ ನೀಡಿದರು.
ಮಂಡಳಿಯ ಪ್ರಾದೇಶಿಕ ಕಚೇರಿ ಆವರಣದಲ್ಲಿ ಬುಧವಾರ ಕೈಗಾರಿಕೆಗಳು-ಗಣಿಗಾರಿಕೆಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಮತ್ತು ವಾಯು ಕಾಯ್ದೆ 1981ರ ಅನುಷ್ಠಾನ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತು ಹೆಚ್ಚಿನ ಅರಿವು ಮೂಡಿಸಿ. ಕೈಗಾರಿಕೆಗಳು ತಮ್ಮ ಆವರಣಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅಪಾಯಕಾರಿ ತ್ಯಾಜ್ಯದ ನಿರ್ವಹಣೆ ಹಾಗೂ ವಿಲೇವಾರಿ ಕುರಿತು ಗಮನ ಹರಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಪ್ರಮುಖ ಕೈಗಾರಿಕೆಗಳು ಮತ್ತು ಗಣಿಗಾರಿಕೆಗಳ ಪ್ರತಿನಿಧಿಗಳು ನಿಯಮ ತಪ್ಪದೆ, ಪಾಲಿಸಬೇಕು. ಮಂಡಳಿಯಿಂದ ನೀಡಿರುವ ಷರತ್ತುಗಳನ್ವಯ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದು ತಾಕೀತು ಮಾಡಿದರು.
ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಅಸೀಫ್ ಖಾನ್ ಮಾತನಾಡಿ, ವಾಯು ಕಾಯ್ದೆ, ಕಾನೂನು ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಿ ಎಂದರು.
ಉಪ ಪರಿಸರ ಅಧಿಕಾರಿ ರಾಜೇಶ್ ಮಾತನಾಡಿ, ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಾರ್ವಜನಿಕರಲ್ಲೂ ಈಗಾಗಲೇ ಸಾಕಷ್ಟು ಅರಿವು ಬಂದಿದ್ದು, ಇನ್ನಷ್ಟು ಪರಿಣಾಮಕಾರಿಯಾಗಲು ಜಾಗೃತಿ ಅಗತ್ಯವಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ವಾಯುಮಾಲಿನ್ಯಕ್ಕೆ ಮೂಲ ಕಾರಣ, ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಮಂಡಳಿಗೆ ಕಾಲಕಾಲಕ್ಕೆ ತಪ್ಪದೆ, ಕೈಗಾರಿಕೆ ಹಾಗೂ ಗಣಿಗಾರಿಕೆ ಕಂಪನಿಗಳು ವರದಿ ಸಲ್ಲಿಸುವಂತೆ ಸೂಚಿಸಲಾಯಿತು.