ಬಸವಕಲ್ಯಾಣ: ವಾಯು ಮಾಲಿನ್ಯ ತಡೆಗಟ್ಟಿ, ಆರೋಗ್ಯಕರ ಜೀವನಕ್ಕೆ ಬೇಕಿರುವ ಉತ್ತಮ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಆರ್‌ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಪರಮಾನಂದ ಸಜ್ಜನ ಹೇಳಿದರು.
ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಸಸ್ತಾಪುರ ಬಂಗ್ಲಾ ಬಳಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ತಮ್ಮ ಮನೆ ಸುತ್ತಲಿನ ಪರಿಸರದಲ್ಲಿ ಸಸಿಗಳನ್ನು ನೆಡುವ ಜತೆಗೆ ಅವುಗಳನ್ನು ಬೆಳೆಸಿ ಪರಿಸರ ಸಂರಕ್ಷೆಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಹೆಚ್ಚುತ್ತಿರುವ ವಾಯು ಮಾಲಿನ್ಯ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಎಲ್ಲರೂ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ. ಹೆಚ್ಚು ಹೊಗೆ ಸೂಸುವ ವಾಹನವೂ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ವಾಹನಗಳ ನಿರ್ವಹಣೆ ಸರಿಯಾಗಿ ಮಾಡುವ ಮೂಲಕ ಹೊಗೆ ಸೂಸದಂತೆ ನೋಡಿಕೊಳ್ಳಬೇಕು ಎಂದರು.
ಐಟಿಐ ಕಾಲೇಜಿನ ಪ್ರಾಚಾರ್ಯ ಪ್ರಲ್ಹಾದ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಆರ್‌ಟಿಒ ಕಚೇರಿ ಅಧೀಕ್ಷಕಿ ರಾಧಿಕಾ, ಮೊಹಮ್ಮದ್ ಆಶೀಫ್‌ಉಲ್ಲಾ, ರಮೇಶ ಹಾದಿಮನಿ, ರಾಜಕುಮಾರ, ರಮೇಶ ಹಣಕುಣಿ ಇತರರಿದ್ದರು.