ಜಿಲ್ಲೆ

ವಾದ& ವಿವಾದದಲ್ಲೇ ಮುಗಿದ ಸಾಮಾನ್ಯ ಸಭೆ

ತುಮಕೂರು ಡೆಸ್ಕ್

ಕೊಟ್ಟ ಭರವಸೆ ಮರೆತಿರಾ ಎಂದು ಶಾಸಕರನ್ನು ಕಿಚಾಯಿಸಿದ ತಿಪಟೂರು ನಗರಸಭೆ ಸದಸ್ಯ

ತಿಪಟೂರು: ನಗರದ ಕಿತ್ತಿರುವ ರಸ್ತೆಗಳಿಗೆ ತಾತ್ಕಾಲಿಕವಾಗಿ ಪ್ಯಾಚ್​ ವರ್ಕ್​ ಮಾಡಲು 20 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿದೆ. ಆದರೆ, ಒಂದೇ ರಸ್ತೆಯಲ್ಲಿ ಮೂರು ಗುಂಡಿಗಳ ಪೈಕಿ ಒಂದನ್ನು ಮುಚ್ಚಿ ಎರಡನ್ನು ಹಾಗೆಯೇ ಬಿಡಲಾಗಿದೆ. ಇದು ಹಣ ಮಾಡುವ ಉದ್ದೇಶವಲ್ಲದೇ ಬೇರೇನೂ ಅಲ್ಲ. ಯಾರೋ ಒಬ್ಬರ ಹಿತಾಸಕ್ತಿಗಾಗಿ

ಗುತ್ತಿಗೆ ನೀಡಲಾಗಿದೆ. ತೇಪೆ ಹಾಕುವ ಕಾಮಗಾರಿಯೂ ಕಳಪೆಯಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.

ನಗರಸಭೆಯಲ್ಲಿ ಶುಕ್ರವಾರ ಅಧ್ಯೆ ಎ.ಎಸ್​. ಯಮುನಾ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ವಿಷಯ ಪ್ರಸ್ತಾಪಿಸಿ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು.

ಸದಸ್ಯರ ಆರೋಪಕ್ಕೆ ಉತ್ತರಿಸಿದ ಸಹಾಯಕ ಇಂಜಿನಿಯರ್​ ರಂಗಸ್ವಾಮಿ, ಕಳೆದ ಡಿಸೆಂಬರ್​ನಲ್ಲಿ ಗಣಪತಿ ಉತ್ಸವದ ವೇಳೆ ಶ್ರೀ ಸತ್ಯಗಣಪತಿ ಉತ್ಸವ ಹಾದುಹೋಗುವ ಪ್ರಮುಖ ರಸ್ತೆಗಳಿಗೆ ಮಾತ್ರ ಪ್ಯಾಚ್​ವರ್ಕ್​ ಮಾಡಲಾಗಿತ್ತು. ಉಳಿದ ರಸ್ತೆಗಳಿಗೆ ಸದ್ಯದಲ್ಲೇ ತೇಪೆ ಹಚ್ಚುವ ಕಾಮಗಾರಿ ನಡೆಯಲಿದೆ ಎಂದು ಸಮಜಾಯಿಷಿ ನೀಡಿದರು.

ಶಾಸಕ-, ಸದಸ್ಯರ ನಡುವೆ ವಾಗ್ವಾದ

ನೆಹರು ನಗರದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಿಕೊಡಿ ಎಂಬ ಸದಸ್ಯ ಸೊಪು$್ಪ ಗಣೇಶ್​ ಮನವಿ ತಿರಸ್ಕರಿಸಿದ ಶಾಸಕ ಕೆ.ಷಡಕ್ಷರಿ. ಅಸಲಿಗೆ ಎಪಿಎಂಸಿ ಮತ್ತು ರೈಲ್ವೆ ಇಲಾಖೆಗೆ ಸೇರಿರುವ ಜಾಗದಲ್ಲಿ ವಾಸಿಸಲು ಅವಕಾಶ ಕಲ್ಪಿಸಿರುವುದೇ ಹೆಚ್ಚು. ಸುಪ್ರೀಂಕೋರ್ಟ್​ ಆದೇಶದ ಪ್ರಕಾರ ಯಾವಾಗ ಬೇಕಾದರೂ ಜಾಗ ತೆರವಾಗಬಹುದು. ನಿಮಗೆ ಈಡೇನಹಳ್ಳಿ ಬಳಿ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರೂ ನೀವುಗಳು ಬರಲಿಲ್ಲ ಎಂಬ ಶಾಸಕರ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸೊಪು$್ಪಗಣೇಶ್​, ಚುನಾವಣೆ ವೇಳೆ ಮತ ಕೇಳುವಾಗ ನೀಡಿದ್ದ ಭರವಸೆ ಮರೆತಿರಾ? ನಿಮಗೆ ಮತ ಹಾಕಿದ್ದಕ್ಕೆ ಪ್ರತಿಯಾಗಿ ಜಾಗ ಉಳಿಸಿಕೊಡಿ ಎಂದು ಕಿಚಾಯಿಸಿದರು. ಈ ಹೇಳಿಕೆ ಒಪ್ಪದ ಶಾಸಕರು, ಜಾಗ ಉಳಿಸಿಕೊಡುವ ಭರವಸೆ ಕೊಟ್ಟು ಮತ ಕೇಳಿರಲಿಲ್ಲ. ನಾನೆಂದೂ ಕಾನೂನು ಬಿಟ್ಟು ಹೋಗಲ್ಲ. ನಿಮ್ಮ ಮಾತು ಕೇಳಿ ಸಾರ್ವಜನಿಕ ಶೌಚಗೃಹ ನಿರ್ಮಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.

ಒಬ್ಬರ ಹಿತಾಸಕ್ತಿಗೆ ಕ್ರಮ ಇಲ್ಲ

ನಗರದ ಕೋಟೆ ಪ್ರದೇಶದ ವಾರ್ಡ್​ ನಂ.2ರಲ್ಲಿ ನಗರಸಭೆಗೆ ಸೇರಿದ ಸ್ವತ್ತಿನಲ್ಲಿ ಅಕ್ರಮವಾಗಿ ಅಂಗಡಿ ನಿರ್ಮಿಸಲಾಗಿದೆ. ಇಲ್ಲಿರುವ ಕೊಳವೆಬಾವಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಸಾರ್ವಜನಿಕ ಶೌಚಗೃಹವಾಗಿ ಮಾರ್ಪಟ್ಟಿದ್ದು, ಕಲುಷಿತ ನೀರು ಕೊಳವೆಬಾವಿ ಸೇರಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಯಾರು ಹೊಣೆ?. ಅನಧಿಕೃತ ಅಂಗಡಿ ತೆರವುಗೊಳಿಸಿ ಎಂದು ಮನವಿ ನೀಡಿ ಮೂರು ತಿಂಗಳಾದರೂ ಕ್ರಮ ವಹಿಸಿಲ್ಲ ಎಂದು ಸದಸ್ಯೆ ಡಾ.ಎಂ.ಎಸ್​. ಓಹಿಲಾ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್​ ನಂಬರ್​ 23ರಲ್ಲಿ ಕಳೆದ 4 ವರ್ಷಗಳಿಂದ ಕೊಳವೆ ಬಾವಿಯಲ್ಲಿ ಮೊಟಾರ್​ ಇಲ್ಲ. ಇನ್ನೊಂದು ಕೊಳವೆಬಾವಿಯಲ್ಲಿ ಮೋಟಾರ್​ ಸಿಲುಕಿ ವರ್ಷವಾಗಿದೆ. ಸಮಸ್ಯೆ ಬಿಗಡಾಯಿಸುವುದಕ್ಕೂ ಮುಂಚೆ ಕೊಳವೆಬಾವಿಗಳನ್ನು ದುರಸ್ತಿ ಮಾಡಿ ಎಂದು ಸದಸ್ಯ ಪ್ರಭು ಮನವಿ ಮಾಡಿದರು.

ಒಗ್ಗಟ್ಟಾಗಿ ಬಂದರಷ್ಟೇ ನಿವೇಶನ

ಹಳೇ ನಗರಸಭೆ ಕಚೇರಿಯ ಒಂದು ಕೊಠಡಿಯನ್ನು ಪತ್ರಕರ್ತರ ಭವನಕ್ಕೆ ಕೊಡಿ ಎಂದು ಸದಸ್ಯ ಪಿ.ಜೆ. ರಾಮಮೋಹನ್​ ಮಾಡಿದ ಮನವಿಗೆ ಸದಸ್ಯ ಟಿ.ಎನ್​. ಪ್ರಕಾಶ್​. ಕಾನೂನು ಪ್ರಕಾರ ಸಾಧ್ಯವಾಗದೇ ಇರುವ ವಿಷಯ ಪ್ರಸ್ತಾಪಿಸಿ ಪತ್ರಕರ್ತರನ್ನು ಓಲೈಸುವುದನ್ನು ಬಿಡಿ ಎಂದರು. ಮಧ್ಯ ಪ್ರವೇಶಿಸಿದ ಶಾಸಕ ಕೆ.ಷಡಕ್ಷರಿ ಅವರು, ಎಲ್ಲ ಪತ್ರಕರ್ತರೂ ಒಗ್ಗಟ್ಟಾಗಿ ಬಂದರೆ ನಿವೇಶನ ನೀಡುವ ಬಗ್ಗೆ ಪರಿಶೀಲಿಸಬಹುದು ಎಂದರು.