ಗೋವಾದ ಪಣಜಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರೋಹನ್ ಜುವಳಿ, ರಾಲ್ಫ್ ಡಿಸೋಜಾ, ಹೇಮೇಂದ್ರ ಫೋರವಾಲ, ಪ್ರಭಾಕರ ನಾಗರಮುನ್ನೋಳಿ, ಸ್ವಪ್ನಿಲ್ ಷಾ, ಸಂಜಯ ಕತ್ತಿಶೆಟ್ಟಿ, ಸಂದೀಪ ಫಾಲದೇಸಾಯಿ ಇತರರು ಪಾಲ್ಗೊಂಡಿದ್ದರು. 
ಜಿಲ್ಲೆ

ವಾಣಿಜ್ಯೋದ್ಯಮ ಬೆಳವಣಿಗೆಗೆ ಪರಸ್ಪರ ಸಹಕರಿಸೋಣ

ಬೆಳಗಾವಿ: ಕೈಗಾರಿಕೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆ ವಿಸ್ತರಿಸು ವುದು ಹಾಗೂ ವ್ಯಾಪಾರ-ವಹಿವಾಟಿಗೆ ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರೀಸ್ ಮತ್ತು ಗೋವಾ ಚೇಂಬರ್ ಆಫ್ ಕಾಮರ್ಸ್‌ನ ಉಭಯ ನಿಯೋಗಗಳು ಗೋವಾದ ಪಣಜಿ ನಗರದಲ್ಲಿ ಭಾನುವಾರ ಸಭೆ ನಡೆಸಿ, ಚರ್ಚಿಸಿವೆ.

ಕರ್ನಾಟಕ-ಮಹಾರಾಷ್ಟ್ರ-ಗೋವಾ ರಾಜ್ಯಗಳ ಗಡಿ ಭಾಗದಲ್ಲಿರುವ ಉದ್ಯಮಿಗಳು ಸರ್ಕಾರದ ಹೊರತಾಗಿಯೂ ಪರಸ್ಪರ ಸಹಕಾರ ಇಟ್ಟುಕೊಂಡಾಗ ಮಾತ್ರ ಈ ಭಾಗದ ಅಭಿವೃದ್ಧಿ ಸಾಧಿಸಲು ಸಾಧ್ಯ. ಬೆಳಗಾವಿ ಹಾಗೂ ಗೋವಾ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಗರಗಳಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ನೂತನ ಉದ್ಯಮ ಆರಂಭಿಸುವುದು, ತಾಜಾ ತರಕಾರಿಗೆ ತೋಟಗಾರಿಕಾ ವಲಯದ ಹಾಗೂ ಸ್ಥಳೀಯ ಕೈಗಾರಿಕಾ ವಲಯದಲ್ಲಿ ರಫ್ತು-ಆಮದು ವಹಿವಾಟು ನಡೆಸುವ ಬಗ್ಗೆ ಚರ್ಚಿಸಲಾಯಿತು.

ವ್ಯಾಪಾರ-ವ್ಯವಹಾರ ಅಭಿವೃದ್ಧಿಯ ನಿಟ್ಟಿನಲ್ಲಿ ಗೋವಾ ಮತ್ತು ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಜಂಟಿಯಾಗಿ ಕೇಂದ್ರ ಸಾರಿಗೆ ಸಚಿವರಿಗೆ ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮನವಿ ಸಲ್ಲಿಸುವುದು, ರಸ್ತೆ ಕಾಮಗಾರಿಯಲ್ಲಿ ಮರಗಳನ್ನು ಕಡಿಯದೇ, ನೂತನ ತಂತ್ರಜ್ಞಾನದ ಮೂಲಕ ಬೇರೆಡೆ ನೆಟ್ಟು, ಪೋಷಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆಯೂ ನಿರ್ಣಯಿಸಲಾಯಿತು. ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಹೇಮೇಂದ್ರ ಫೋರವಾಲ, ಪ್ರಭಾಕರ ನಾಗರಮುನ್ನೋಳಿ, ಸ್ವಪ್ನಿಲ್ ಷಾ, ಸಂಜಯ ಕತ್ತಿಶೆಟ್ಟಿ, ಗೋವಾ ತೋಟಗಾರಿಕಾ ಇಲಾಖೆ ನಿರ್ದೇಶಕ ಸಂದೀಪ ಫಾಲದೇಸಾಯಿ ಇತರರು ಇದ್ದರು.

ಸಬ್ಸಿಡಿ ಲಾಭ ಪಡೆಯಿರಿ

ಗೋವಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾಲ್ಫ್ ಡಿಸೋಜಾ ಮಾತನಾಡಿ, ಗೋವಾದಲ್ಲಿ ಆಪ್ಟಿಕಲ್ ಫೈಬರ್ ಉತ್ಪಾದನೆ ಹೇರಳವಾಗಿದ್ದು, ಬೆಳಗಾವಿಯಲ್ಲೂ ಅವಕಾಶ ಬಳಸಿಕೊಳ್ಳಬಹುದು. ಗೋವಾ ವಾಣಿಜ್ಯ ಬಂದರಿನ ಮೂಲಕ ಆಮದು-ರಫ್ತು ವ್ಯವಹಾರ ನಡೆಸಲು ಅವಕಾಶಗಳಿವೆ. ಗೋವಾ ಸರ್ಕಾರ ವಿದ್ಯುತ್ ಉತ್ಪನ್ನಗಳಿಗೆ ಸಬ್ಸಿಡಿ ನೀಡುತ್ತಿದ್ದು, ಬೆಳಗಾವಿ ಉದ್ಯಮಿಗಳು ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಅವಕಾಶ ಸದ್ಬಳಕೆಗೆ ಮನವಿ

ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರೋಹನ್ ಜುವಳಿ ಮಾತನಾಡಿ, ಕರ್ನಾಟಕದ 2ನೇ ರಾಜಧಾನಿ ಖ್ಯಾತಿಯ ಬೆಳಗಾವಿಯಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳೂ ಇವೆ. ದೇಶದ ಏಕೈಕ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯ ಹಾಗೂ ಜವಳಿ ಉದ್ಯಮ ಹೊಂದಿದೆ. ಇಂಜಿನಿಯರಿಂಗ್ ಮತ್ತು ಫೌಂಡ್ರಿ ಉದ್ಯಮದಲ್ಲಿ ಬೆಂಗಳೂರು ಹೊರತುಪಡಿಸಿ ಅತಿ ಹೆಚ್ಚು ಉದ್ದಿಮೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಗೋವಾ ಸೇರಿ ಅಂತಾರಾಜ್ಯ ಉದ್ಯಮಗಳಿಗೆ ಹೂಡಿಕೆ ಮಾಡಿ,ಕೈಗಾರಿಕೆ ನಡೆಸಲು ಹೇರಳ ಅವಕಾಶವಿದೆ ಎಂದು ಮನದಟ್ಟು ಮಾಡಿದರು.