ಜಿಲ್ಲೆ

ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ಪುನಾರಂಭಕ್ಕೆ ಚಿಂತನೆ

ಚಿತ್ರದುರ್ಗ: ನಗರದ ಗಾಂಧಿ ವೃತ್ತ, ಸಂತೆಹೊಂಡದ ಬಳಿ ಸ್ಥಗಿತಗೊಂಡಿರುವ ವಾಣಿಜ್ಯಸಂಕೀರ್ಣಗಳ ಕಾಮಗಾರಿ ಪುನಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಗಾಂಧಿವೃತ್ತ ಹಾಗೂ ಸಂತೆಹೊಂಡದ ಬಳಿ ಹಲವು ವರ್ಷಗಳ ಹಿಂದೆ 15ನೇ ಹಣಕಾಸು ಯೋಜನೆಯಡಿ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಅನುದಾನ ಕೊರತೆಯಿಂದ ಕಾಮಗಾರಿಗಳು ಸ್ಥಗಿತವಾಗಿವೆ. ಡಿಎಂಎಫ್, ನಗರಸಭೆ ಅನುದಾನದೊಂದಿಗೆ ಕಾಮಗಾರಿಗಳನ್ನು ಮುಂದುವರಿಸಲು ಆಲೋಚಿಸಲಾಗಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.

ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ:

ಗಾಂಧಿ ವೃತ್ತ ಹಾಗೂ ಸಂತೆಹೊಂಡದ ಬಳಿ ಎಲ್ಲೆಂದರಲ್ಲಿ ಬಿದ್ದಿದ್ದ ತ್ಯಾಜ್ಯ ನೋಡಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಸಂತೆಹೊಂಡದ ಬಳಿ ರಾತ್ರಿ ವೇಳೆ ಹೋಟೆಲ್‌ಗಳಿಂದ ತಾಜ್ಯ ತಂದು ಸುರಿಯಲಾಗುತ್ತದೆ ಎಂದು ಬೀದಿ ಬದಿ ವ್ಯಾಪಾರಿಗಳು ನೀಡಿದ ದೂರಿಗೆ ಸ್ಪಂದಿಸಿದ ಸಚಿವರು, ತ್ಯಾಜ್ಯ ಸುರಿಯುವ ಹೋಟೆಲ್‌ಗಳ ಪರವಾನಗಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಾರುಕಟ್ಟೆ ಸ್ಥಳಾಂತರಕ್ಕೆ ನಿರ್ದೇಶನ: ಸಂತೆಹೊಂಡ ಬಳಿಯ ತರಕಾರಿ, ಹಣ್ಣು ಮಾರಾಟದ ಅಂಗಡಿಗಳು ಹಾಗೂ ಬೀದಿಬದಿ ವ್ಯಾಪಾರಿಗಳನ್ನು ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಸಚಿವರು ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ಸೂಚಿಸಿದರು.

ಹತ್ತು ವರ್ಷಗಳ ಹಿಂದೆ ಖಾಸಗಿ ಬಸ್ ನಿಲ್ದಾಣ ಹಿಂಭಾಗದಲ್ಲಿ ಮಾರುಕಟ್ಟೆ ನಿರ್ಮಿಸಿ ಈ ಹಿಂದೆ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೂ, ವ್ಯಾಪಾರಿಗಳು ಸ್ಥಳಾಂತರ ಮಾಡಿಲ್ಲ. ಇದರಿಂದ ನಗರಸಭೆಗೆ ಆರ್ಥಿಕ ನಷ್ಟವಾಗುತ್ತಿದೆ. ಕೂಡಲೇ ಸಂತೆಹೊಂಡ ಬಳಿಯ ತರಕಾರಿ, ಹಣ್ಣು ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. ಕ್ರಮ ವಹಿಸದಿದ್ದರೆ ನಗರಸಭೆಗಾದ ಅರ್ಥಿಕ ನಷ್ಟವನ್ನು ತಮ್ಮಿಂದ ವಸೂಲಿ ಮಾಡಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಚಿವರು ಆಯುಕ್ತರನ್ನು ಎಚ್ಚರಿಸಿದರು.ಜಿಲ್ಲಾಧಿಕಾರಿ ಟಿ. ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಇತರರು ಇದ್ದರು.