ಜಿಲ್ಲೆ

ವಾಣಿಜ್ಯ ಮಳಿಗೆಗಳಿಂದ ಪ್ರತ್ಯೇಕ ಕಸ ಸಂಗ್ರಹ, ಕಸ ವಿಲೇವಾರಿ ವಾಹನಕ್ಕೆ ಹಸಿರು ನಿಶಾನೆ

ಆನೇಕಲ್: ಪಟ್ಟಣವನ್ನು ಕಸಮುಕ್ತ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಒಂದು ವಿನೂತನ ಪ್ರಯತ್ನವಾಗಿ ವಾಣಿಜ್ಯ ಮಳಿಗೆಗಳಿಂದ ಸಂಜೆ ವೇಳೆ ಕಸ ಸಂಗ್ರಹಿಸುವ ಯೋಜನೆ ಆರಂಭಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ತಿಳಿಸಿದರು.

ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆಗಳ ಕಸ ವಿಲೇವಾರಿಗೆ ಪ್ರತ್ಯೇಕ ವಾಹನ ಸಂಚಾರಕ್ಕೆ ಹಸಿರುನಿಶಾನೆ ತೋರಿ ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಬೆಳಗ್ಗೆ ಪುರಸಭೆ ವಾಹನಗಳು ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುತ್ತವೆ. ಆದರೆ ಈ ವೇಳೆ ವಾಣಿಜ್ಯ ಮಳಿಗೆಗಳು ಅಂಗಡಿ-ಮುಂಗಟ್ಟುಗಳು ತೆರೆದಿರುವುದಿಲ್ಲ. ಸಂಜೆ ಸಮಯದಲ್ಲಿ ಕಸವನ್ನು ರಸ್ತೆಯಲ್ಲಿ ಬಿಸಾಡಿ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆ ಪೌರಕಾರ್ಮಿಕರು ವಾಣಿಜ್ಯ ಮಳಿಗೆಗಳ ಬಳಿ ಹೋಗಿ ಕಸ ಸಂಗ್ರಹಿಸಲಿದ್ದಾರೆ ಎಂದು ಹೇಳಿದರು.

ಪುರಸಭೆಯಿಂದ ನಿಯೋಜಿಸಿರುವ ಕಸ ವಿಲೇವಾರಿ ವಾಹನ ಬಂದಾಗ ವಾಣಿಜ್ಯ ಮಳಿಗೆಯವರು ಕಸವನ್ನು ಗಾಡಿಗೆ ಕೊಡಬೇಕು. ಅದನ್ನು ಬಿಟ್ಟು ರಸ್ತೆಗೆ ಎಸೆದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ನಟರಾಜು ಮಾತನಾಡಿ, ವಾಣಿಜ್ಯ ಮಳಿಗೆಗಳು, ಹಣ್ಣು ತರಕಾರಿ ಅಂಗಡಿ ಅವರಿಂದ ರಸ್ತೆಗಳಲ್ಲಿ ಕಸದ ರಾಶಿ ಕಾಣುತ್ತಿತ್ತು. ಈ ಸಮಸ್ಯೆ ಪರಿಹರಿಸಲು ಪ್ರತಿದಿನ ಮಧ್ಯಾಹ್ನ 3ರಿಂದ ರಾತ್ರಿ 7 ಗಂಟೆಯವರೆಗೆ ಕಸ ಸಂಗ್ರಹಿಸಲು ಪುರಸಭೆಯಿಂದ ಒಂದು ವಾಹನ ಮೀಸಲಿಡಲಾಗಿದೆ ಎಂದರು.

ಮುಖಂಡರಾದ ಲಕ್ಷ್ಮೀನಾರಾಯಣ್, ರಾಜೇಂದ್ರ ಪ್ರಸಾದ್, ರಮೇಶ್, ಆಸಿಫ್ ಮತ್ತಿತರರು ಇದ್ದರು.