ಜಿಲ್ಲೆ

ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಆಗ್ರಹ

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ವಿವಿಧ ಸವಲತ್ತುಗಳನ್ನು ಕೋರಿ ಅರ್ಜಿ ಸಲ್ಲಿಸಿದರು.


ಮಲ್ಲಿಪಟ್ಟಣದಲ್ಲಿ ಗ್ರಾ.ಪಂ. ವಾಣಿಜ್ಯ ಮಳಿಗೆಗಳ ಹರಾಜು ನಡೆಸಿ ಹಲವಾರು ವರ್ಷಗಳೇ ಕಳೆದಿದೆ. ಕೆಲವರು ಮಳಿಗೆಗಳನ್ನು ಬೇರೆಯವರಿಗೆ ಹೆಚ್ಚು ಬಾಡಿಗೆಗೆೆ ನೀಡಿ, ಪಂಚಾಯಿತಿಗೆ ಕಡಿಮೆ ಬಾಡಿಗೆ ಹಣ ಪಾವತಿಸುತ್ತಿದ್ದಾರೆ. ಇದರಿಂದ ಪಂಚಾಯಿತಿಗೆ ಬರಬೇಕಾದ ಲಾಭ ಕೈತಪ್ಪುತ್ತಿದೆ. ಮಳಿಗೆಗಳ ಮರು ಹರಾಜು ನಡೆಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು.


ಗ್ರಾ.ಪಂ. ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಳೆದ ಬಾರಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಕರೊನಾ ಕಾರಣದಿಂದಾಗ ಮಳಿಗಳ ವರ್ತಕರು ವ್ಯಾಪಾರವಾಗದೆ ನಷ್ಟದಲ್ಲಿರುವುದಾಗಿ ಮನವಿ ಮಾಡಿದ್ದರಿಂದ ಹರಾಜು ನಡೆಸುವುದನ್ನು ಕೈ ಬಿಡಲಾಯಿತು. ಅಲ್ಲದೇ ಮುಖ್ಯರಸ್ತೆಯ ಕೊಡ್ಲಿಪೇಟೆ ಇಲ್ಲವೇ ಶನಿವಾರಸಂತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ ಎಂಬ ಮಾಹಿತಿ ಬಂದಿದೆ. ರಸ್ತೆ ನಿರ್ಮಾಣವಾದರೆ ಮಳಿಗೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಹರಾಜು ನಡೆಸಲು ಸಾಧ್ಯವಾಗಿಲ್ಲ. ಈ ಕುರಿತು ಶೀಘ್ರವೇ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.


ತೋಟಗಾರಿಕೆ ಇಲಾಖೆ ಅಧಿಕಾರಿ ಧನಂಜಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಳೆ ಬೆಳೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ರೈತರು ಅಡಿಕೆ ಬೆಳೆ ಜತೆಗೆ ತಾಳೆ ಬೆಳೆದರೆ ಲಾಭದಾಯಕವಾಗಲಿದೆ ಎಂದರು.


ತಾಪಂ ಯೋಜನಾಧಿಕಾರಿ ಧರ್ಮೇಂದ್ರ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಇಲಾಖೆ ಅಧಿಕಾರಿ ಹರೀಶ್, ಪಿಡಿಒ ಅರುಣ್‌ಕುಮಾರ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಸುಮಿತ್ರಮ್ಮ, ಲಕ್ಷ್ಮಮ್ಮ, ಯಶೋಧಮ್ಮ, ಪ್ರಕಾಶ್, ಯೋಗೇಶ್, ಕಾಂತರಾಜು, ಚಂದ್ರೇಗೌಡ, ಪೂಜಾ, ಲಲಿತಾ, ಜಯಲಕ್ಷ್ಮೀ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಚಂದ್ರಕಲಾ, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಶೃತಿ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಶಂಕರ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೌಶಿಕ್, ತಾಲೂಕು ಆರೋಗ್ಯ ಅಮೃತ ಅಭಿಯಾನ ಯೋಜನೆ ಸಂಯೋಜಕ ಚಂದ್ರಶೇಖರ್, ಶೋಭಾ, ಧರ್ಮಯ್ಯ ಇತರರಿದ್ದರು.