ಅರಸೀಕೆರೆ: ನಗರದ ಸಂತೆ ಮೈದಾನದಲ್ಲಿ ಅಂದಾಜು 3.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸುವ ಜತೆಗೆ ಶೀಘ್ರವೇ ಹರಾಜು ಪ್ರಕ್ರಿಯೆ ನಡೆಸಲು ಅಧ್ಯಕ್ಷ ಸಿ.ಗಿರೀಶ್ ಉಪಸ್ಥಿತಿಯಲ್ಲಿ ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ವಿಷಯ ಪ್ರಸ್ತಾಪಿಸಿದ ಸಿ.ಗಿರೀಶ್ ಮಳಿಗೆಗಳನ್ನು ಹರಾಜಿಗೂ ಮುನ್ನವೇ ಅತಿಕ್ರಮಿಸಲಾಗಿದೆ ಎನ್ನುವ ದೂರುಗಳಿವೆ. ಎಲ್ಲ ಸಮುದಾಯಗಳ ಜನರಿಗೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಮಾಡಿಕೊಡುವ ಮೂಲಕ ನಗರಸಭೆಗೂ ಆದಾಯ ಬರಬೇಕು. ಹೀಗಾಗಿ ಹರಾಜು ಪ್ರಕ್ರಿಯೆ ನಡೆಸೋಣ ಎಂದು ಸಲಹೆ ಮುಂದಿಟ್ಟರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಂಬಂಧಿಸಿದ ಇಲಾಖೆ ಸಚಿವರನ್ನು ಕರೆತಂದು ಉದ್ಘಾಟನೆಗೊಳಿಸಿ ಆಸಕ್ತರಿಗೆ ಅವಕಾಶ ಮಾಡಿಕೊಡೋಣ ಎಂದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಈಶಣ್ಣ ಮಾತನಾಡಿ, ಕಾಳನಕೊಪ್ಪಲು, ಹೆಂಜಗೊಂಡನಹಳ್ಳಿ ಹಾಗೂ ಗುಂಡ್ಕಾನಹಳ್ಳಿ ಗ್ರಾಮಗಳನ್ನು ನಗರಸಭೆ ಪರಿಮಿತಿಗೆ ತರಬೇಕು, ಬಡಾವಣೆ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಜೇನುಕಲ್‌ನಗರ ಹಾಗೂ ವೃಷಭೇಂದ್ರ ನಗರಕ್ಕೆ ಹೊಂದಿಕೊಂಡಂತಿರುವ ಶಿವಾಲಯದ ಆಸುಪಾಸಿನಲ್ಲಿರುವ ನಿವೇಶನಗಳು ಯಾರ ಪಾಲಾಗಿವೆ ಎನ್ನುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅನ್ನಪೂರ್ಣ ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಅಧ್ಯಕ್ಷ ಸಿ.ಗಿರೀಶ್, ಕೇವಲ ಎರಡು ಬಡಾವಣೆಗಳಲ್ಲಿ ತನಿಖೆ ನಡೆದರೆ ಸಾಲದು, ಮಾರುತಿ ನಗರ, ಕಾಳನಕೊಪ್ಪಲು, ಲಕ್ಷ್ಮೀಪುರ ಸೇರಿದಂತೆ 31 ವಾರ್ಡ್ ವ್ಯಾಪ್ತಿಯಲ್ಲಿನ ಅಕ್ರಮ ಲೇಔಟ್‌ಗಳ ಜತೆಗೆ ಸಿಎ ಜಾಗ, ರಸ್ತೆ ನಾಪತ್ತೆ ಸೇರಿ ಎಲ್ಲ ಅಕ್ರಮಗಳನ್ನು ತನಿಖೆ ನಡೆಸಲು ನನ್ನ ಸಂಪೂರ್ಣ ಸಹಮತವಿದೆ ಎಂದರು. ತಕ್ಷಣವೇ ಮಧ್ಯೆ ಪ್ರವೇಶಿಸಿದ ಕೆ.ಎಂ.ಶಿವಲಿಂಗೇಗೌಡ ತನಿಖೆ ನಡೆಯಲಿ ಬಿಡಿ ಎಂದು ಪರಿಸ್ಥಿತಿ ತಿಳಿಗೊಳಿಸಿದರು.
ಜಿ.ಟಿ.ಗಣೇಶ್, ಮೇಲುಗಿರಿಗೌಡ, ಪ್ರೇಮಾ ಮಲ್ಲಿಕಾರ್ಜುನ್, ಮಧುರಾ ಹರೀಶ್, ಎಂ.ಆರ್.ವೆಂಕಟಮುನಿ ಇತರ ಸದಸ್ಯರು, ಬೀದಿದೀಪ, ಕುಡಿಯುವ ನೀರು ಸೇರಿ ಹಲವು ಸಮಸ್ಯೆಗಳ ಕುರಿತು ಮಾತನಾಡಿದರು.
ತರಕಾರಿ ಹರಾಜು ಪ್ರಕಿಯೆಯನ್ನು ಗೀಜಿಹಳ್ಳಿ ಉಪ ಪ್ರಾಂಗಣಕ್ಕೆ ಸ್ಥಳಾಂತರಿಸುವುದು, ವಿದ್ಯಾರ್ಥಿವೇತನ, ನಗರಸಭೆ ಕಟ್ಟಡ ನವೀಕರಣ, ಹಾಸನ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಳ ವಿಸ್ತರಣೆ ಒಳಗೊಂಡಂತೆ ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು.
ಉಪಾಧ್ಯಕ್ಷ ಕಾಂತೇಶ್, ಪೌರಾಯುಕ್ತ ಕೃಷ್ಣಮೂರ್ತಿ, ಕಚೇರಿ ವ್ಯವಸ್ಥಾಪಕಿ ಕಲಾವತಿ ಇತರರು ಇದ್ದರು.